ಹುಬ್ಬಳ್ಳಿ: ಈದ್ಗಾ ಮೈದಾನಕ್ಕೆ (Idga Maidana) ರಾಣಿ ಚೆನ್ನಮ್ಮನವರ ಹೆಸರಿಡುವುದನ್ನು ಪ್ರಶ್ನಿಸಿ ಹಾಕಿದ್ದ ಪಿಐಎಲ್ ಅನ್ನು ಹೈಕೋರ್ಟ್ (High Court) ತಿರಸ್ಕೃತವಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ (Hubballi) ಈದ್ಗಾ ಮೈದಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಣಿ ಚೆನ್ನಮ್ಮ ಮೈದಾನ ಎಂಬ ಮರುನಾಮಕರಣಕ್ಕೆ ಮುಂದಾಗಿತ್ತು.
ಇದನ್ನು ಪ್ರಶ್ನಿಸಿ ಉಡುಪಿ (Udupi) ನಿವಾಸಿ ಹುಸೇನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು.
ಪಾಲಿಕೆ ಪರವಾಗಿ ವಾದ ಮಂಡಿಸಿದ ಎಸ್.ಎಸ್. ಮಹೇಂದ್ರ, ಮೈದಾನ ಪಾಲಿಕೆಯ ಆಸ್ತಿ. ಇದರ ಮೇಲೆ ಸಂಪೂರ್ಣ ಹಕ್ಕು ಪಾಲಿಕೆಗೆ ಇದೆ. ಆಕ್ಷೇಪಣೆ ಸ್ವೀಕರಿಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು, ಈದ್ಗಾ ಮೈದಾನಕ್ಕೆ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಇಡುವ ಬಗ್ಗೆ, ಇತ್ತೀಚೆಗೆ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದೆ. ನಂತರ ಆ ಕುರಿತು ಪ್ರಕಟಣೆ ಹೊರಡಿಸಲಾಗಿದೆ. 30 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಕೆ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಾದ ಮಂಡಿಸಿದ್ದರು. ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶ ಪರಿಶೀಲಿಸಿದ ಪೀಠವು ಈದ್ಗಾ ಮೈದಾನದ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಮೈದಾನ ಎಂಬುದಾಗಿ ಬದಲಾಯಿಸಲು ಪಾಲಿಕೆ 2022ರ ಆಗಸ್ಟ್ 25ರಂದು ನಿರ್ಣಯ ಕೈಗೊಂಡಿದೆ. ಈ ಸಂಬಂಧ 2023ರ ಫೆಬ್ರವರಿ 8ರಂದು ಸಾರ್ವಜನಿಕರ ಆಕ್ಷೇಪಣೆ ಕೋರಲಾಗಿದೆ. ಅದರಂತೆ ಅರ್ಜಿದಾರರು ಸಹ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ಈ ಆಕ್ಷೇಪಣೆ ಮೇಲೆ ಪಾಲಿಕೆಯು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅದಕ್ಕೂ ಮುನ್ನವೇ ಈ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ ಅರ್ಜಿಯು ಅಪಕ್ವವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಅಷ್ಟೇ ಅಲ್ಲದೇ ಅಕ್ಷೇಪಣೆ ಕುರಿತು ಪಾಲಿಕೆಯು ವ್ಯತಿರಿಕ್ತ ನಿರ್ಣಯ ಕೈಗೊಂಡರೆ ಅರ್ಜಿದಾರರು ಮತ್ತೆ ಪಿಐಎಲ್ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದೆ. ಇದನ್ನು ಒಪ್ಪಿದ ಅರ್ಜಿದಾರ ಅರ್ಜಿಯನ್ನು ಹಿಂಪಡೆದಿದ್ದಾರೆ.
ರಾಣಿ ಚೆನ್ನಮ್ಮ ಹೆಸರಿಡುವ ಬಗ್ಗೆ ಎಐಎಂಐಎಂ ವಿರೋಧ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ-ಧಾರವಾಡ ಪಾಲಿಕೆ ಕಚೇರಿ ಎದುರು ಎಐಎಂಐಎಂ ಕಾರ್ಯಕರ್ತರು ಇತ್ತೀಚೆಗೆ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ್ ನೇತೃತ್ವದಲ್ಲಿ ಧರಣಿ ಸಹ ನಡೆಸಿದ್ದರು.
ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹೀಗಿರುವಾಗ ಮೈದಾನದ ಹೆಸರು ಬದಲಾಯಿಸುವುದು ಸರಿಯಲ್ಲ. ರಾಜಕೀಯ ದುರುದ್ದೇಶದಿಂದ ಹೆಸರು ಬದಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿ, ಮರುನಾಮಕರಣ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದ್ದರು.