ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್ ಅಲ್ಲಿ ತಮ್ಮ ಪ್ರಭಾವ ಬಳಸಿ ಸಾಕಷ್ಟು ಸವಲತ್ತುಗಳನ್ನು ಪಡೆದುಕೊಂಡಿದ್ದರು. ದರ್ಶನ್ ಜೈಲಿನಲ್ಲಿರುವ ಫೋಟೋವೊಂದು ವೈರಲ್ ಆಗಿ ಸಾಕಷ್ಟು ಟೀಕೆಗಳು ಕೇಳಿ ಬಂದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ಎಂಟ್ರಿಕೊಡ್ತಿದ್ದಂಗೆ ನಟನಿಂದಾಗಿ ಭದ್ರತಾ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿ ನೀಡುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡು ಬಂದಿದೆ. ನಟನಿಗೆ ಕೂಲಿಂಗ್ ಗ್ಲಾಸ್ ಧರಿಸಲು ಭದ್ರತಾ ಸಿಬ್ಬಂದಿ ಅನುಮತಿ ನೀಡಿದ್ದಾರೆ. ಪರಿಣಾಮವಾಗಿ, ಕರ್ತವ್ಯ ಲೋಪ ಎಸಗಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷ ಅವರು ಪತ್ರ ಬರೆದಿದ್ದಾರೆ.
ಬೆಂಗಳೂರಿನಿಂದ ಹೊರಟು ಬಳ್ಳಾರಿ ಜೈಲು ತಲುಪಿದ ದರ್ಶನ್ ಅವರು ಕಾರಾಗೃಹದ ಒಳಗೆ ಎಂಟ್ರಿ ನೀಡುವಾಗ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್ ಗ್ಲಾಸ್ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವ ಆಗಿದೆ.
ಜೈಲಿನ ನಿಯಮಾನುಸಾರ ಮುಖ್ಯ ದ್ವಾರದಲ್ಲಿ ಸ್ವಂತ ವಸ್ತುಗಳನ್ನು ಒಪ್ಪಿಸಬೇಕು. ಆದರೆ ದರ್ಶನ್ಗೆ ಕೂಲಿಂಗ್ ಗ್ಲಾಸ್ ಧರಿಸಲು ಅನುಮತಿ ನೀಡಿದ್ದರಿಂದ ಕರ್ತವ್ಯಲೋಪ ಆಗಿದೆ. ಈ ಹಿನ್ನೆಲೆಯಲ್ಲಿ, ದರ್ಶನ್ ಅವರನ್ನು ಕರೆತಂದ ಭದ್ರತಾ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಪತ್ರ ಬರೆದಿದ್ದಾರೆ. ಶಿಸ್ತು ಕ್ರಮ ಜರುಗಿಸಲು ಮಾನ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.
ದರ್ಶನ್ ಜತೆ ಕೈಕುಲುಕಲು ನಿರಾಕರಿಸಿದ ಪೊಲೀಸ್
ಬಳ್ಳಾರಿ ಜೈಲ್ ಒಳಗೆ ಹೋಗುವಾಗ ಪೊಲೀಸ್ ಅಧಿಕಾರಿಗಳಿಗೆ ಹಸ್ತಲಾಘವ ಮಾಡಲು ದರ್ಶನ್ ಮುಂದಾದರು. ಬೆಂಗಳೂರು ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಬಂದಿದ್ದ ಎಸಿಪಿಗೆ ಶೇಕ್ ಹ್ಯಾಂಡ್ ನೀಡಲು ದರ್ಶನ್ ಪ್ರಯತ್ನಿಸಿದರು. ಆದರೆ ದರ್ಶನ್ ಜೊತೆ ಕೈ ಕುಲುಕಲು ಪೊಲೀಸ್ ಅಧಿಕಾರಿ ನಿರಾಕರಿಸಿದರು.