ಅಮೆರಿಕಾ ಅಧ್ಯಕ್ಷಿಯ ಚುನಾವಣೆಯಲ್ಲಿ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಸಿಎನ್ಎನ್ಗೆ ನೀಡಿದ ಮೊದಲ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ‘ನೀತಿ ಹಾಗೂ ದೃಷ್ಟಿಕೋನದಲ್ಲಿ ನನ್ನ ಮೌಲ್ಯಗಳು ಬದಲಾಗಿಲ್ಲ‘ ಎಂದಿದ್ದಾರೆ.
‘ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಸಾಧ್ಯವಾಗಿದೆ. ಆದರೆ ಆರ್ಥಿಕತೆಯು ಸವಾಲಿನಿಂದ ಕೂಡಿದ ವಿಷಯವಾಗಿದ್ದು, ಇನ್ನೂ ಉತ್ತಮ ಕೆಲಸ ಮುಂದುವರಿಸಬೇಕಿದೆ‘ ಎಂದು ಹೇಳಿದರು.
‘ಅಮೆರಿಕದ ಅಧ್ಯಕ್ಷೆ ಹುದ್ದೆ ವಹಿಸಲು ನಾನು ಸೂಕ್ತ ಅಭ್ಯರ್ಥಿ ಎಂದು ನಂಬಿದ್ದೇನೆ. ಮಧ್ಯಮ ವರ್ಗದವರನ್ನು ಬಲಪಡಿಸುವುದು ನನ್ನ ಆದ್ಯತೆಗಳಲ್ಲಿ ಒಂದಾಗಿದೆ‘ ಎಂದು ಕಮಲಾ ಹ್ಯಾರಿಸ್ ತಿಳಿಸಿದರು.
ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧವೂ ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿದರು. ‘ಅಮೆರಿಕದ ಜನರ ಮಹತ್ವಾಕಾಂಕ್ಷೆಗಳ ಕುರಿತು ನೋಡಿದಾಗ, ಜನರು ಹೊಸ ಹಾದಿ ಸ್ವೀಕರಿಸಲು ಸಿದ್ಧರಾಗಿದ್ದಾರೆ‘ ಎಂದು ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ‘ಬೋರಿಂಗ್‘ ಎಂದು ವ್ಯಂಗ್ಯವಾಡಿದ್ದಾರೆ. ‘ಆಕೆ ನಾಯಕಿ ಎಂದು ನನಗೆ ಅನಿಸುತ್ತಿಲ್ಲ‘ ಎಂದು ಟೀಕಿಸಿದ್ದಾರೆ.
ಅಮೆರಿಕದಲ್ಲಿ ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಜೋ ಬೈಡನ್ ಹಿಂದೆ ಸರಿದ ಬಳಿಕ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.