ಬೆಂಗಳೂರು/ ದೆಹಲಿ: ಚನ್ನಪಟ್ಟಣ ಉಪ ಚುನಾವಣೆಗೆ ಟಿಕೆಟ್ ಫೈಟ್ ಜೋರಾಗಿದ್ದು, ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಶನಿವಾರ ಭೇಟಿಯಾದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ಬಿಜೆಪಿ ನಾಯಕರು, ಜೆ.ಪಿ ನಡ್ಡಾ ನಿವಾಸದಲ್ಲಿ ಚುನಾವಣೆ ಕುರಿತು ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು
ರಾಷ್ಟ್ರೀಯ ಅಧ್ಯಕ್ಷರ ಭೇಟಿ ಬಳಿಕ ಆರ್.ಅಶೋಕ್ ಮಾತನಾಡಿ, ನಿನ್ನೆ ರಾತ್ರಿ ಚನ್ನಪಟ್ಟಣದ ವಿಚಾರ ಸುದೀರ್ಘ ಚರ್ಚೆಯಾಗಿದೆ. ಇಂದು ಬಿ.ಎಲ್.ಸಂತೋಷ್ ಮತ್ತು ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಚನ್ನಪಟ್ಟಣದ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಹೇಳಿಕೆ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣಕ್ಕೆ ಹೋಗಿ ಕಿವಿ ಮೇಲೆ ಹೂವಿಡಲು ಸಾಧ್ಯವಿಲ್ಲ. ಚನ್ನಪಟ್ಟಣ ಜನ ಜಾಣರಿದ್ದಾರೆ. ಮಂಡ್ಯ ವಿಚಾರದಲ್ಲೂ ಅದೇ ರೀತಿಯಲ್ಲಿ ಹೇಳಿದ್ರು. ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ಹೋಗ್ತಾರೆ ಅಂದಿದ್ರು. ಆದರೆ ಕುಮಾರಸ್ವಾಮಿ ಕೇವಲ ಎರಡು ದಿನ ಪ್ರಚಾರಕ್ಕೆ ಹೋಗಿ ಗೆಲುವು ಸಾಧಿಸಿದ್ರು. ಕಳೆದ ಬಾರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ಗೆ ಕೇವಲ 20 ಸಾವಿರ ವೋಟ್ ಬಂದಿದೆ. ಅದ್ಹೇಗೆ ಗೆಲ್ಲುತ್ತಾರೆ, ಜನರು ಇವರ ನಾಟಕ ನೋಡಿದ್ದಾರೆ. ಡಿಕೆಶಿ ವಿಸಿಟಿಂಗ್ ಡಾಕ್ಟರ್ ಇದ್ದ ಹಾಗೆ. ಚುನಾವಣೆ ಬಂದಾಗ ಮಾತ್ರ ಹೋಗ್ತಾರೆ. ವಿಸಿಟಿಂಗ್ ಡಾಕ್ಟರ್ ಆಪರೇಷನ್ ಇದ್ದಾಗ ಮಾತ್ರ ಹೋಗ್ತಾರಲ್ಲ ಹಾಗೆ ಎಂದು ಲೇವಡಿ ಮಾಡಿದರು