ಬೆಂಗಳೂರು:- ವಾಸ್ತವ ಸಂಗತಿಗಳಿಗೆ ಕನ್ನಡಿ ಹಿಡಿಯೋ ಕೆಲಸ ಮಾಧ್ಯಮಗಳು ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ ಸಮಾಜದ ವೇಗ ಮಾಧ್ಯಮಕ್ಕಿಂತಲೂ ಹೆಚ್ಚಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುವ ವ್ಯವಸ್ಥೆ ಸೃಷ್ಟಿಯಾಗಿದೆ. ಹಾಗಾಗಿ ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ ಎಂದರು.
ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.
ತುಂಗಾಭದ್ರ ಅಣೆಕಟ್ಟೆ ಕ್ರಸ್ಟ್ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಆಣೆಕಟ್ಟು ತುಂಬಲಿದೆ ಎಂದರು.
ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶಗಳನ್ನು ಶೋಧಿಸಬೇಕು. ಈಗ ಮಾಧ್ಯಮಗಳು ಹೆಚ್ಚಾಗಿ ಅವರು ಹೀಗೆ ಹೇಳಿದರು, ಇವರು ಹೀಗೆ ಹೇಳಿದ್ದಾರೆ ಎಂದು ಪ್ರಶ್ನೆ ಮಾಡುವಿರಿಯೇ ಹೊರತು, ಅವರು ಹೇಳಿರುವುದರಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸುವುದಿಲ್ಲ. ಮಾಧ್ಯಮದವರು ಹೇಳಿದರು ಎಂದು ನಾವು ಪರಿಶೀಲನೆ ಮಾಡದೇ ಉತ್ತರ ಕೊಟ್ಟರೆ ನಮ್ಮ ಮರ್ಯಾದೆಯೂ ಹೋಗುತ್ತದೆ. ಹೀಗಾಗಿ ವಾಸ್ತವಾಂಶಗಳನ್ನು ಪರಿಶೀಲಿಸಿ ನಂತರ ಸುದ್ದಿ ಪ್ರಕಟಿಸಿ ಎಂದರು.