ವೆಸ್ಟ್ ಇಂಡೀಸ್ನ ಅನುಭವಿ ಆಟಗಾರ ಶಾನನ್ ಗೇಬ್ರಿಯಲ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈ ಬಾರಿಯ ಸಿಪಿಎಲ್ ಮುಕ್ತಾಯದೊಂದಿಗೆ ವೆಸ್ಟ್ ಇಂಡೀಸ್ ಟಿ20 ಲೀಗ್ಗೆ ವಿದಾಯ ಹೇಳುತ್ತಿರುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೊ ಕೆರಿಬಿಯನ್ ಪ್ರೀಮಿಯರ್ ಲೀಗ್ನಿಂದ ನಿವೃತ್ತಿ ಘೋಷಿಸಿದ್ದಾರೆ.
ಇದು ಉತ್ತಮ ಪ್ರಯಾಣ. ಹಾಗೆಯೇ ಇದು ನನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಸೀಸನ್. ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದೊಂದಿಗೆ ನಾನು ಸಿಪಿಎಲ್ ಆರಂಭಿಸಿದ್ದೆ, ಇದೀಗ ಇದೇ ತಂಡದೊಂದಿಗೆ ವಿದಾಯ ಹೇಳುತ್ತಿರುವುದಾಗಿ ಡ್ವೇನ್ ಬ್ರಾವೊ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಡ್ವೇನ್ ಬ್ರಾವೊ ಟಿ20 ಫ್ರಾಂಚೈಸಿ ಲೀಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ತವರಿಗೆ ಟಿ20 ಲೀಗ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ಮುಂಬರುವ ದಿನಗಳಲ್ಲಿ ಇತರೆ ಲೀಗ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 104 ಪಂದ್ಯಗಳನ್ನಾಡಿರುವ ಬ್ರಾವೊ 74 ಇನಿಂಗ್ಸ್ಗಳಿಂದ ಒಟ್ಟು 1155 ರನ್ ಕಲೆಹಾಕಿದ್ದಾರೆ. ಇದೇ ವೇಳೆ 1978 ಎಸೆತಗಳನ್ನು ಎಸೆಯುವ ಮೂಲಕ ಒಟ್ಟು 128 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ 2017 ಮತ್ತು 2018 ರಲ್ಲಿ ಡ್ವೇನ್ ಬ್ರಾವೊ ನಾಯಕತ್ವದಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು ಸಿಪಿಎಲ್ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. 2023 ರಲ್ಲಿ ಐಪಿಎಲ್ಗೆ ಗುಡ್ ಬೈ ಹೇಳಿದ್ದ ಬ್ರಾವೊ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.