ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನವಾದ ಬಳಿಕ ಬಾಂಗ್ಲಾದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಇದೀಗ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಕನಿಷ್ಠ 49 ಶಿಕ್ಷಕರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ ಎಂದು ಹಿಂಸಾಚಾರ ಪೀಡಿತ ರಾಷ್ಟ್ರದ ಅಲ್ಪಸಂಖ್ಯಾತ ಸಂಘಟನೆಯೊಂದು ತಿಳಿಸಿದೆ.
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಓಕ್ಯ ಪರಿಷತ್ತಿನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಓಕ್ಯ ಪರಿಷತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದೆ ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
76 ವರ್ಷದ ಪ್ರಧಾನಿ ಹಸೀನಾ ಅವರನ್ನು ಪದಚ್ಯುತಗೊಳಿಸಿ ಪಲಾಯನಗೊಳಿಸಿದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಹಿಂಸಾಚಾರದಲ್ಲಿ ದೇಶಾದ್ಯಂತ ಅಲ್ಪಸಂಖ್ಯಾತ ಶಿಕ್ಷಕರು ದೈಹಿಕ ಹಲ್ಲೆಯನ್ನು ಎದುರಿಸಿದರು. ಅವರಲ್ಲಿ 49 ಮಂದಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ಆದಾಗ್ಯೂ, ಅವರಲ್ಲಿ 19 ಮಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ, ಲೂಟಿ, ಮಹಿಳೆಯರ ಮೇಲೆ ಹಲ್ಲೆ, ದೇವಸ್ಥಾನಗಳ ಧ್ವಂಸ, ಮನೆ ಮತ್ತು ಅಂಗಡಿಗಳ ಮೇಲೆ ಬೆಂಕಿ, ದಾಳಿ ಮತ್ತು ಹತ್ಯೆಗಳು ನಡೆದಿವೆ ಎಂದು ಸರ್ಕಾರ್ ಹೇಳಿದರು.