ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಇಂದು ವಿಚಾರಣೆ ನಡೆಯಲಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ಕಳೆದ ಶನಿವಾರ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆದಿತ್ತು.
ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಈ ಪ್ರಕರಣದ ತೀರ್ಪನ್ನು ಇಂದಿಗೆ ಅಂದರೆ ಸೆಪ್ಟೆಂಬರ್ 2ಕ್ಕೆ ಮುಂದೂಡಿತ್ತು.
ಇಂದು ಮೂಡಾ ನಿವೇಶನ ಹಂಚಿಕೆ ಕುರಿತ ಸುದೀರ್ಘ ವಾದ -ಪ್ರತಿವಾದದ ವಿಚಾರಣೆ ಮತ್ತು ತೀರ್ಪು ಇಂದು ಮಧ್ಯಾಹ್ನ 2.30ಕ್ಕೆ ಬರಲಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಇಂದು ಬಹುತೇಕ ಎಲ್ಲರ ವಾದ ಮುಗಿಯುವ ಸಾಧ್ಯತೆ ಇದ್ದು, ಈತನ್ಮಧ್ಯೆ ಇಂದು ಪುನಃ ವಾದ ಮಂಡನೆಗೆ ಅಡ್ವೋಕೇಟ್ ಜನರಲ್ ಅವಕಾಶ ಕೇಳಿದ್ದಾರೆ. ಹೀಗಾಗಿ ಇಂದು ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ವಾದ ನಡೆಸಲಿದ್ದಾರೆ, ಅಲ್ಲದೆ ಪ್ರತಿವಾದಿಗಳ ಪರ ವಕೀಲರಿಂದಲೂ ವಾದ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ತುಷಾರ್ ಮೆಹ್ತಾ, ಪ್ರತಿವಾದಿ ಪ್ರದೀಪ್ ಪರವಾಗಿ ಪ್ರಭುಲಿಂಗ ನಾವದಗಿ, ಸ್ನೇಹಮಯಿ ಕೃಷ್ಣ ಪರವಾಗಿ ಮಣೀಂದರ್ ಸಿಂಗ್ ಹಾಗೂ ಟಿ ಜೆ ಅಬ್ರಾಹಂ ಪರವಾಗಿ ರಂಗನಾಥ್ ರೆಡ್ಡಿ ವಾದ ಮಂಡನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪ್ರಾಸಿಕ್ಯೂಷನ್ ಅರ್ಜಿ ನಿರ್ಣಾಯಕ ಹಂತಕ್ಕೆ ಬರುವ ಸಾಧ್ಯತೆ ಇದೆ.