ಚೆನ್ನೈ: ಹೇಮಾ ವರದಿ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ನಟ ರಜನಿಕಾಂತ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ಜಸ್ಟೀಸ್ ಹೇಮಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡಿನಲ್ಲಿ ಅಂತಹ ಸಮಿತಿ ರಚಿಸಬೇಕೆಂಬ ಬೇಡಿಕೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ, ಕ್ಷಮಿಸಿ ಎಂದು ನಟ ಹೇಳಿದ್ದಾರೆ.
ಮಲಯಾಳ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ವರದಿ ಬಹಿರಂಗಗೊಂಡ ಬೆನ್ನಲ್ಲೇ ಕಲಾವಿದರ ಸಂಘಕ್ಕೆ ಅಧ್ಯಕ್ಷ ನಟ ಮೋಹನ್ಲಾಲ್, ಇತರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.
ಕಳೆದ ಒಂದು ದಿನದ ಹಿಂದೆಯಷ್ಟೇ ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಮೌನ ಮುರಿದು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದ ಯಾವುದೇ ಪವರ್ ಗ್ರೂಪ್ನಲ್ಲಿ (ಶಕ್ತಿ ಬಣ) ನಾನು ಗುರುತಿಸಿಕೊಂಡಿಲ್ಲ. ಅಂತಹ ಬಣಗಳ ಅಸ್ತಿತ್ವದ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಅಂತ. ಹೇಮಾ ಸಮಿತಿ ವರದಿ ಬಿಡುಗಡೆ ಮಾಡಿರುವುದು ಸರ್ಕಾರ ಉತ್ತಮ ನಿರ್ಧಾರವಾಗಿದೆ ಅಂತ ಹೇಳಿದ್ದರು.
ಅಲ್ಲದೇ ರಾಜೀನಾಮೆ ನೀಡಲು ಕಾರಣವೇನು ಎಂಬ ಪ್ರಶ್ನೆಗೆ, ವರದಿ ಬಿಡುಗಡೆಯಾದ ಬೆನ್ನಲ್ಲೇ ಕಲಾವಿದರ ಸಂಘದ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಯಿತು. ಸಂಘದ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಾಕ್ಷಿಗಳಿದ್ದರೆ ಶಿಕ್ಷಿಸಲಿ ಎಂದು ಸಹ ಆಗ್ರಹಿಸಿದ್ದರು.