ದಾವಣಗೆರೆ:- ಸಿರಿಗೆರೆ ಶ್ರೀ ವಿರುದ್ಧ ಆಸ್ತಿ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಭಕ್ತರ ಕರಪತ್ರಕ್ಕೆ ಶಿವಮೂರ್ತಿ ಶಿವಾಚಾರ್ಯಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.ನಾವು ಕೆಲ ಆಸ್ತಿಗಳನ್ನು ಖರೀದಿಸಿದ್ದೇವೆ. ನಮ್ಮ ಹೆಸರಿಗೆ, ಮಠದ ಹೆಸರಿಗೆ, ಶಿಷ್ಯರ ಹೆಸರಿಗೆ ಮಾಡಿಸಿದ್ದೇವೆ.
ಮಠಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿ ಮಠಕ್ಕೆ ಸೇರಿದ್ದು. ಮಠದ ಕಾರ್ಯದರ್ಶಿ ಆಗಿದ್ದ ಸಿದ್ದಯ್ಯ ಹೆಸರಿಗೂ ಆಸ್ತಿ ಮಾಡಿಸಿದ್ದೆವು. ಆಸ್ತಿ ತನಗೆ ಸೇರಿದ್ದು ಎಂದು ಮಾಜಿ ಕಾರ್ಯದರ್ಶಿ ಸಿದ್ದಯ್ಯ ಕೊರ್ಟ್ಗೆ ಹೋಗಿದ್ದರು. ಕೋರ್ಟ್ನಲ್ಲಿ ಸಿದ್ದಯ್ಯನ ಅರ್ಜಿ ವಜಾ ಆಯಿತು. ಮಠದ ಆಸ್ತಿ ಕಬಳಿಸಲು ಯತ್ನಿಸಿದ್ದ ಸಿದ್ದಯ್ಯ ವಿರುದ್ಧ ಹೋರಾಡಿ, ನಮ್ಮ ವಿರುದ್ಧ ಅಲ್ಲ ಎಂದಿದ್ದಾರೆ.
ದಾವಣಗೆರೆ ರೆಸಾರ್ಟ್ನಲ್ಲಿ ಸಭೆ ಮಾಡಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಾಗಲೇ ಈ ವಿಚಾರಕ್ಕೆ ಕೊನೆ. ಸಭೆ ಮಾಡಿದವರು ಗ್ರಾಮಗಳಿಗೆ ಹೋಗುತ್ತೇವೆಂದು ಹೇಳಿದ್ದರು. ಗ್ರಾಮಗಳಿಗೆ ಹೋದರೆ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ವಿವಿಧ ಗ್ರಾಮಗಳ ಜನರು ಇಂದು ನಮ್ಮನ್ನು ಬೆಂಬಲಿಸಿ ಪತ್ರ ನೀಡಿದ್ದೀರಿ. ಎಲ್ಲಾ ಪತ್ರಗಳು ಬಹುತೇಕ ಒಂದೇ ಮಾದರಿಯಲ್ಲಿವೆ. ನಾವೇ ಡ್ರಾಫ್ಟ್ ಮಾಡಿಸಿ ಪತ್ರ ಸ್ವೀಕರಿಸಿದ್ದೇವೆಂಬ ಆರೋಪ ಬರಬಹುದು ಎಂದು ಹೇಳಿದ್ದಾರೆ.
ನಮ್ಮ ಜನಕ್ಕೆ ಲೇಖನಿಗಿಂತ ಕಣಿಗೆ, ಕುಡುಗೋಲು ಗೊತ್ತು. ನಮ್ಮ ಗುರುಗಳು ಅರವತ್ತು ವರ್ಷಕ್ಕೆ ನಿವೃತ್ತಿ ಘೋಷಿಸಿ ತ್ಯಾಗ ಪತ್ರ ನೀಡಿದ್ದರು. ಮಠದ ಬೈಲಾದಲ್ಲಿ ನಿವೃತ್ತಿ ಬಗ್ಗೆ ನಿಯಮ ಇಲ್ಲ. 2012ರಲ್ಲಿ ನಾವು ಸಹ ನಿವೃತ್ತಿ ಬಯಸಿದ್ದೆವು, ತ್ಯಾಗಪತ್ರ ನೀಡಿಲ್ಲ. ಈ ಹಿಂದೆ ಗುರುಶಾಂತಶ್ರೀ 48 ವರ್ಷದವರಿದ್ದಾಗ. ಕೊಲೆಗೀಡಾಗಿದ್ದರು. ನಮಗೂ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನಮ್ಮ ಗುರುಗಳು ಮಠದ ವಿರುದ್ಧವಿದ್ದವರ ಕೈಕಾಲು ಮುರಿಸುತ್ತಿದ್ದರು. ಈಗ ಅಂಥ ಪರಿಸ್ಥಿತಿ ಇಲ್ಲ, ಕಾನೂನಾತ್ಮಕವಾಗಿ ಹೋಗಬೇಕು ಎಂದಿದ್ದಾರೆ.