ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಇದೀಗ ರಿಯಲ್ ಲೈಫ್ ನಲ್ಲಿ ನಾಯಕಿಯಂತೆ ಹೆಸರು ಮಾಡುತ್ತಿರುವ ನಟಿ ಲೀಲಾವತಿ. ಚಿತ್ರರಂಗದಿಂದ ದೂರಾಗಿ ನೆಲಮಂಗಲದ ಬಳಿ ಹಳ್ಳಿಯೊಂದರಲ್ಲಿ ಮಗ ವಿನೋದ್ ರಾಜ್ ಜೊತೆ ನೆಲೆಸಿರುವ ಹಿರಿಯ ನಟಿ ಲೀಲಾವತಿ ಬಡ ಬಗ್ಗದವರಿಗೆ ತಮ್ಮ ಶಕ್ತಿಗೂ ಮೀರಿ ಸಹಾಯ ಮಾಡುತ್ತಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ತಾವು ನೆಲೆಸಿರುವ ಊರಲ್ಲೇ ಆಸ್ಪತ್ರೆಯೊಂದನ್ನು ಕಟ್ಟಿ ಲೋಕಾರ್ಪಣೆ ಮಾಡಿದ ಈ ಲೀಲಾವತಿ ಹಾಗೂ ವಿನೋದ್ ರಾಜ್ ಇದೀಗ ಪಶುಗಳಿಗಾಗಿ ಆಸ್ಪತ್ರೆಯೊಂದನ್ನು ಕಟ್ಟಲು ಮುಂದಾಗಿದ್ದಾರೆ. ಪಶು ಆಸ್ಪತ್ರೆ ನಿರ್ಮಾಣಕ್ಕೆ ನಿನ್ನೆ (ಮಾರ್ಚ್ 20) ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಪಶು ಆಸ್ಪತ್ರೆ ನಿರ್ಮಿಸಬೇಕು ಎಂಬುದು ಲೀಲಾವತಿಯವರ ಆಸೆ. ಇದನ್ನ ಬಹಳ ಹಿಂದೆಯೇ ಲೀಲಾವತಿ ಹೇಳಿಲೊಂಡಿದ್ದರು. ಅದರಂತೆಯೇ ನೆಲಮಂಗಲದ ಬಳಿಕ ಧರ್ಮನಾಯಕನ ತಾಂಡ್ಯಾದಲ್ಲಿ ವಿನೋದ್ ರಾಜ್, ಲೀಲಾವತಿ, ಶಾಸಕ ಶ್ರೀನಿವಾಸ ಮೂರ್ತಿ, ಎಂಎಲ್ಸಿ ರವಿ ಅವರುಗಳು ಒಟ್ಟಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಇದೇ ವೇಳೇ ಮಾದ್ಯಮಗಳೊಂದಿಗೆ ಮಾತನಾಡಿದ ನಟ ವಿನೋದ್ ರಾಜ್, ”ಮನುಷ್ಯರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾಯಿತು. ಮಾತು ಬಾರದ ಪ್ರಾಣಿಗಳಿಗಾಗಿಯೂ ಏನಾದರೂ ಮಾಡಬೇಕು ಎಂದು ತಾಯಿ ಹೇಳಿದರು. ಅವರಿಗೆ ಪ್ರಾಣಿಗಳ ಮೇಲೆ ವಿಶೇಷ ಮಮತೆ. ಕಳೆದ ಕೆಲವು ವರ್ಷಗಳಿಂದಲೂ ಹಲವು ನಾಯಿಗಳನ್ನು ಅವರು ಸಾಕುತ್ತಿದ್ದಾರೆ. ಅವರ ಆಸೆಯಂತೆ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಪಶು ಆಸ್ಪತ್ರೆ ನಿರ್ಮಾಣಕ್ಕಾಗಿ ಸ್ಥಳವನ್ನು ನೀಡಿರುವ ಪಂಚಾಯಿತಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಮ್ಮನವರ ಮೇಲೆ ನಂಬಿಕೆ ಇಟ್ಟು ಅವರು ಜಾಗ ಕೊಟ್ಟಿದ್ದಾರೆ” ಎಂದಿದ್ದಾರೆ.
ಹಿರಿಯ ನಟಿ ಲೀಲಾವತಿ ಮಾತನಾಡಿ, ಪ್ರಾಣಿಗಳು ನನ್ನ ಪ್ರಾಣದಂತೆ. ಅವುಗಳಿಗಾಗಿ ಏನನ್ನಾದರೂ ಮಾಡಬೇಕು ಎಂದುಕೊಂಡು ಈಗ ಆಸ್ಪತ್ರೆ ಕಟ್ಟಿಸುತ್ತಿದ್ದೇವೆ. ಒಬ್ಬಳ ಕೈಯಿಂದಲೇ ಆಗುವಂಥಹಾ ಕೆಲಸಗಳು ಇವಲ್ಲ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದ ಲೀಲಾವತಿಯವರು, ನಾನು ಸಿಎಂಗೆ ಮನವಿ ಮಾಡುತ್ತೇನೆ. ಆಸ್ಪತ್ರೆಗೆ ಬೇಕಾದ ವೈದ್ಯರು ಇತರೆ ವ್ಯವಸ್ಥೆಗಳನ್ನು ಅವರು ಮಾಡಿಕೊಡಬೇಕು ಎಂದಿದ್ದಾರೆ.