ಕೋಲ್ಕತ್ತಾ: ಕಳೆದ ತಿಂಗಳು ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ನನ್ನ ಕೇಂದ್ರೀಯ ತನಿಖಾ ದಳ ಬಂಧಿಸಿದೆ. ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ಸಂದೀಪ್ ಘೋಷ್ ಅವರನ್ನ ಬಂಧಿಸಿದೆ.
ಸತತ 2 ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾಜಿ ಪ್ರಾಂಶುಪಾಲರ ಬಂಧನವಾಗಿದೆ.
ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡದಿಂದ ಸಿಬಿಐ ತನಿಖೆ ಹೊಣೆ ವಹಿಸಿಕೊಂಡಿತ್ತು. ಬಳಿಕ ಎಫ್ಐಆರ್ ದಾಖಲಿಸಿದ್ದ ಸಿಬಿಐ ಕಳೆದ 2 ವಾರಗಳಿಂದ 150ಕ್ಕೂ ಹೆಚ್ಚುಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.
ಸಂದೀಪ್ ಘೋಷ್, 2021ರ ಫೆಬ್ರವರಿಯಿಂದ 2023ರ ಸೆಪ್ಟೆಂಬರ್ ವರೆಗೆ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2023 ರಲ್ಲಿ ವರ್ಗಾವಣೆಯಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಮತ್ತೆ ಅದೇ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು. ಕಳೆದ ತಿಂಗಳು ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ದಿನದವರೆಗೂ ಅವರು ಹುದ್ದೆಯಲ್ಲಿದ್ದರು.
ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಬಂಗಾಳ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿತು. ಈ ಬೆನ್ನಲ್ಲೇ ಸಂದೀಪ್ ಘೋಷ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದಾದ ಬಳಿಕ ಈ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘವು ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತು.