ಹೈದರಾಬಾದ್: ಕುಂಭದ್ರೋಣ ಮಳೆ ಮತ್ತು ಪ್ರವಾಹಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ತತ್ತರಿಸಿವೆ. ನದಿಗಳು ಉಕ್ಕೇರಿವೆ. ಜಲಾಶಯಗಳಲೆಲ್ಲಾ ಭರ್ತಿ ಆಗಿದ್ದು, ಅಪಾರ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ. ವಿಜಯವಾಡದಲ್ಲಿ ಪ್ರವಾಹದ ತೀವ್ರತೆ ಕಡಿಮೆ ಆಗಿದ್ದರೂ ತಗ್ಗುಪ್ರದೇಶಗಳಲ್ಲಿ ಪರಿಸ್ಥಿತಿ ದಯನೀಯವಾಗಿದೆ.
130ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಲದಿಗ್ಬಂಧನ ಏರ್ಪಟ್ಟಿದ್ದು, ಬೋಟ್ಗಳ ಮೂಲಕ ಸಂತ್ರಸ್ತರ ರಕ್ಷಣಾ ಕಾರ್ಯ ನಡೆದಿದೆ. 2.26 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ. ಈವರೆಗೂ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮೆಹಬೂಬಾಬಾದ್ ಬಳಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ವಾಹನದಿಂದ ಒಂದೇ ಕುಟುಂಬದ 9 ಮಂದಿಯನ್ನು ರಕ್ಷಿಸಲಾಗಿದೆ.
ರಾಯಪಾಡಿ ಎಂಬಲ್ಲಿ 300ಕ್ಕೂ ಹೆಚ್ಚು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಕೈಕೊಟ್ಟಿದೆ. ಹೆದ್ದಾರಿಗಳು ಕೂಡ ಸಂಪೂರ್ಣವಾಗಿ ಪ್ರವಾಹದಿಂದ ಮುಕ್ತವಾಗಲಿಲ್ಲ. ಇನ್ನು, ರೈಲ್ವೇ ಸೇವೆಗಳಲ್ಲಿ ಭಾರೀ ವ್ಯತ್ಯಯ ಆಗಿದೆ. ದಕ್ಷಿಣ ಮಧ್ಯೆ ರೈಲ್ವೇ ವಿಭಾಗದಲ್ಲಿ 432 ರೈಲುಗಳು ರದ್ದಾಗಿವೆ. 140 ರೈಲುಗಳ ಮಾರ್ಗ ಬದಲಿಸಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಬೆಳಗ್ಗೆ ನಾಲ್ಕು ಗಂಟೆ ತನಕ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂಚರಿಸಿದರು.