ಬೆಂಗಳೂರು:- ಐಷಾರಾಮಿ ಬದುಕು, ವೃತ್ತಿ ಜೀವನ ಆರಂಭವಾದಾಗಿನಿಂದ ದರ್ಶನ್ ಅಕ್ಷರಶಃ ಚಕ್ರವರ್ತಿಯಂತೆ, ಸ್ಯಾಂಡಲ್ವುಡ್ನ ಅನಭಿಷಕ್ತ ದೊರೆಯಂತೆ ಮರೆದು ಬಿಟ್ಟವರು. ಆದ್ರೆ ಈಗ ಕಾಲಚಕ್ರ ಬದಲಾಗಿದೆ. ಹಾಗೆಲ್ಲ ಬದುಕಿದ ದರ್ಶನ್ ಈಗ ಹೇಗೇಗೋ ಬದುಕುತ್ತಿದ್ದಾರೆ. ದರ್ಶನ್ರ ಈಗಿನ ಬದುಕಿಗೆ ಮೂಕ ಸಾಕ್ಷಿಯಾಗಿ ನಿಂತಿದೆ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲು.
ಬಳ್ಳಾರಿ ಜೈಲಲ್ಲಿರೋ ದರ್ಶನ್, ಒಂಟಿತನ, ಸೊಳ್ಳೆಕಾಟ, ಹೊಟ್ಟೆ ಸಮಸ್ಯೆ, ನಿತ್ಯ ಕರ್ಮದ ಸಮಸ್ಯೆ ಸೇರಿದಂತೆ ಅಷ್ಟದಿಗ್ಬಂಧನದಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿದ್ದಾರೆ. ಹಾಗಾದ್ರೆ, ಬಳ್ಳಾರಿ ಜೈಲಲ್ಲಿ ದರ್ಶನ್ಗೆ ಯಾವ್ ಯಾವ ರೀತಿನ ನರಕ ದರ್ಶನವಾಗ್ತಿದೆ ಗೊತ್ತಾ?
ಅದ್ಯಾವಾಗ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಎತ್ತಂಗಡಿ ಆದ್ರೋ ಆಗಿಂದ ಅಕ್ಷರಶಃ ಕುಗ್ಗಿ ಹೋಗ್ತಿದ್ದಾರೆ. ಜೈಲು ಅಂದ್ರೆ ಏನು ಅನ್ನೋದು ಈಗ ಅನುಭವಕ್ಕೆ ಬರುತ್ತಿದೆ. ನರಕ ಕೂಪಕ್ಕೆ ಸಾಕ್ಷಾತ್ ಉದಾಹರಣೆಯಂತಿರೋ ಆ ಜೈಲಿಗೆ ಶಿಫ್ಟಾಗಿ ನಾಲ್ಕೈದು ದಿನಗಳಾಗಿರಬಹುದಷ್ಟೇ ಆದ್ರೆ ಈ ನಾಲ್ಕೈದು ದಿನಗಳನ್ನ ಅಕ್ಷರಶಃ ನಾಲ್ಕೈದು ವರ್ಷಗಳಂತೆ ಕಳೀತಿದ್ದಾರೆ ದರ್ಶನ್. ಇಲ್ಲಿದ್ದಾಗ ಕುಡಿಯೋಕೆ, ತಿನ್ನೋಕೆ, ಧಮ್ ಹೊಡೆಯೋಕೆ ಅಡೆತಡೆಗಳಿರಲಿಲ್ಲ ಅನ್ನೋದು ಒಂದು ಫೋಟೋ, ಒಂದು ವಿಡಿಯೋದಿಂದ ಬಯಲಾಗಿರೋ ವಿಚಾರ. ಆದ್ರೆ, ಬಳ್ಳಾರಿ ಜೈಲಿಗೆ ಹೋದ್ಮೇಲೆ ದರ್ಶನ್ ಪಾಲಿಗೆ ಎಲ್ಲವೂ ಬಂದ್ ಆಗಿಬಿಟ್ಟಿದೆ.
ಮಾತಾಡೋಕೂ ಯಾರೂ ಇಲ್ಲ, ಕಮಿಕ್ ಗಿಮಿಕ್ ಅನ್ನಂಗಿಲ್ಲ. ದಿನನಿತ್ಯ ಒಂದಿಲ್ಲೊಂದು ಸಮಸ್ಯೆಗಳು ದರ್ಶನ್ನ ಕಾಡ್ತಿದ್ದು, ಈ ಮಧ್ಯೆ ನಟನಿಗೆ ಚಾರ್ಜ್ಶೀಟ್ ಅನ್ನೋ ಬುಲೆಟ್ಗಳನ್ನ ಫೈರ್ ಮಾಡೋದಕ್ಕೆ ಪೊಲೀಸರು ಸರ್ವಸನ್ನದ್ಧರಾಗಿದ್ದಾರೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಪಟ್ಟಣಗೆರೆಯ ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ಹೆಚ್ಚು ಕಡಿಮೆ ಫೈನಲ್ ಹಂತಕ್ಕೆ ಬಂದಿದೆ..ಆರೋಪಿಗಳನ್ನ ಬಂಧಿಸಿದ 90 ದಿನಗಳಲ್ಲಿ ಚಾರ್ಜ್ಶೀಟ್ ಕೋರ್ಟ್ಗೆ ಸಲ್ಲಿಕೆಯಾಗಬೇಕು. ದರ್ಶನ್ ಮತ್ತವರ ಗ್ಯಾಂಗ್ ವಿಚಾರದಲ್ಲಿ ಆ 90 ದಿನಗಳು ಹತ್ತಿರವಾಗುತ್ತಿದೆ. ಪೊಲೀಸರು ಕೊಲೆ ಆಗಿದೆ ಅನ್ನೋದಕ್ಕೆ ಪ್ರಬಲ ಸಾಕ್ಷ್ಯಗಳ ರಾಶಿಯನ್ನೇ ಸಂಗ್ರಹಿಸಿದ್ದು, ಯಾವುದೇ ಸಮಯದಲ್ಲೂ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ರೆಡಿಯಾಗ್ತಿದ್ದಾರೆ. ಬರೋಬ್ಬರಿ 4000ಕ್ಕೂ ಅಧಿಕ ಪುಟಗಳ ಚಾರ್ಜ್ಶೀಟ್ ಇದಾಗಿದ್ದು, ಸಂಪೂರ್ಣ ಡಿ ಗ್ಯಾಂಗ್ಗೆ ಖೆಡ್ಡಾ ತೋಡೋದು ಪಕ್ಕಾ ಎನ್ನುವ ಮಾಹಿತಿ ಸಿಕ್ತಿದೆ.
ಇನ್ನೆರಡು ದಿನದಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡ್ತೀವಿ ಅಂತ ಹೇಳಿದ್ದಾರೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ. ದರ್ಶನ್ ಅಭಿಮಾನಿಗಳಿಂದ ಹಿಡಿದು, ಅವರ ಪರ ವಕೀಲರು, ಸಿನಿಮಾ ನಿರ್ಮಾಪಕರು, ದರ್ಶನ್ ಕುಟುಂಬಸ್ಥರು ಎಲ್ಲರ ಕಣ್ಣೂ ಪೊಲೀಸರ ಈ ಚಾರ್ಜ್ಶೀಟ್ ಮೇಲೆ ನೆಟ್ಟಿದೆ.