ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 6 ವರ್ಷಗಳ ಬಳಿಕ ಸಿಂಗಾಪುರಕ್ಕೆ ಭೇಟಿ ನೀಡಿದ್ದಾರೆ. ಬ್ರೂನೆಯಲ್ಲಿ ತಮ್ಮ ಎರಡು ದಿನಗಳ ಪ್ರವಾಸವನ್ನು ಮುಗಿಸಿದ ನಂತರ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಚಾಂಗಿ ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗೆ ಅಧಿಕೃತ ಸ್ವಾಗತ ನೀಡಲಾಯಿತು. ವಾಂಗ್ ಅವರನ್ನು ಭೇಟಿ ಮಾಡುವುದರ ಹೊರತಾಗಿ, ನರೇಂದ್ರ ಮೋದಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಹಿರಿಯ ಸಚಿವರಾದ ಲೀ ಸೀನ್ ಲೂಂಗ್ ಮತ್ತು ಹಿರಿಯ ಸಚಿವ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ವಾಂಗ್ ಮತ್ತು ಲೀ ಮೋದಿಯವರಿಗೆ ಪ್ರತ್ಯೇಕ ಊಟದ ಮೂಲಕ ಆತಿಥ್ಯ ನೀಡಲಿದ್ದಾರೆ.
‘ಸಿಂಗಾಪೂರ್ಗೆ ಬಂದಿಳಿದಿದೆ. ಭಾರತ-ಸಿಂಗಾಪುರದ ಸ್ನೇಹವನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಸಭೆಗಳನ್ನು ಎದುರು ನೋಡುತ್ತಿದ್ದೇವೆ. ಭಾರತದ ಸುಧಾರಣೆಗಳು ಮತ್ತು ನಮ್ಮ ಯುವ ಶಕ್ತಿಯ ಪ್ರತಿಭೆಯು ನಮ್ಮ ರಾಷ್ಟ್ರವನ್ನು ಆದರ್ಶ ಹೂಡಿಕೆಯ ತಾಣವನ್ನಾಗಿ ಮಾಡುತ್ತದೆ. ನಾವು ನಿಕಟ ಸಾಂಸ್ಕೃತಿಕ ಸಂಬಂಧಗಳನ್ನು ಎದುರು ನೋಡುತ್ತಿದ್ದೇವೆ’ ಎಂದು ನರೇಂದ್ರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಸಿಂಗಾಪುರ್ 1965ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. ವ್ಯಾಪಾರ ಮತ್ತು ಹೂಡಿಕೆ, ಆರ್ಥಿಕ ಸಹಕಾರ, ರಕ್ಷಣೆ, ಕಡಲ ಭದ್ರತೆ, ಇಂಧನ ಮತ್ತು ಹೆಚ್ಚಿನವುಗಳಲ್ಲಿ ದೃಢವಾದ ಸಂಬಂಧಗಳೊಂದಿಗೆ ಎರಡೂ ದೇಶಗಳು ಸ್ನೇಹ ಸಂಬಂಧಗಳನ್ನು ಹಂಚಿಕೊಂಡವು. 2015ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿಂಗಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಸಿಂಗಾಪುರ ಸಂಬಂಧಗಳನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲಾಯಿತು.