ಹೈದ್ರಾಬಾದ್: ಆಂಧ್ರಪ್ರದೇಶ, ತೆಲಂಗಾಣದಲ್ಲಿ ವರುಣನ ಆರ್ಭಟ ಮುಗಿಲು ಮುಟ್ಟಿದ್ದು, ರಣಭೀಕರ ಮಳೆಗೆ ಎರಡು ರಾಜ್ಯಗಳಲ್ಲಿ 35 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದ ಪರಿಸ್ಥಿತಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿರುವ ಜನರಿಗೆ ಡ್ರೋನ್ಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಪೂರೈಸಲಾಗುತ್ತಿದೆ.ಇನ್ನೂ ತೆಲುಗು ಚಿತ್ರರಂಗ ಸಹ ಎರಡೂ ರಾಜ್ಯಗಳ ಸರ್ಕಾರಗಳ ನೆರವಿಗೆ ನಿಂತಿದೆ.
ಅದರಲ್ಲೂ ಕೆಲ ಸ್ಟಾರ್ ನಟರುಗಳು ದೊಡ್ಡ ಮೊತ್ತವನ್ನು ಪರಿಹಾರ ಕಾರ್ಯಗಳಿಗಾಗಿ ನೀಡಿದ್ದಾರೆ. ಇದೀಗ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ಎಂದೇ ಕರೆಸಿಕೊಳ್ಳುವ ಪ್ರಭಾಸ್ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬರೋಬ್ಬರಿ 5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ತೆಲಂಗಾಣ ಸಿಎಂ ಪರಿಹಾರ ನಿಧಿಗೆ 2.50 ಕೋಟಿ ಹಾಗೂ ಆಂಧ್ರ ಪ್ರದೇಶ ಸಿಎಂ ರಿಲೀಫ್ ಫಂಡ್ಗೆ 2.50 ಕೋಟಿ ರೂಪಾಯಿಗಳಂತೆ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಪ್ರಭಾಸ್ ದೇಣಿಗೆಯಾಗಿ ನೀಡಿದ್ದಾರೆ. ಈ ಹಿಂದೆ ಕೇರಳದಲ್ಲಿ ಭಾರಿ ಪ್ರವಾಹ ಉಂಟಾದಾಗ ನಟ ಪ್ರಭಾಸ್ ಒಂದು ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದರು. ಈಗ ತಮ್ಮ ಸ್ವಂತ ರಾಜ್ಯದಲ್ಲೇ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿ ಐದು ಕೋಟಿ ರೂಪಾಯಿ ಹಣ ನೀಡಿದ್ದಾರೆ.