ಯುದ್ಧಪೀಡಿತ ಗಾಝಾದಲ್ಲಿ ದೊಡ್ಡ ಪ್ರಮಾಣದಲ್ಲಿ ಪೋಲಿಯೊ ಲಸಿಕೆ ಅಭಿಯಾನ ಆರಂಭವಾಗಿದೆ. ಅದರ ಮೊದಲ ಹಂತವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಫೆಲೆಸ್ತೀನ್ ಪ್ರದೇಶದ ಮಧ್ಯಭಾಗದಲ್ಲಿರುವ ಸುಮಾರು 2 ಲಕ್ಷ ಮಕ್ಕಳಿಗೆ ಮೊದಲ ಡೋಸ್ ಅನ್ನು ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.
ನಿತ್ಯ ನಡೆಯುತ್ತಿರುವ ಯುದ್ಧದಿಂದಾಗಿ ಸುಮಾರ 2.4 ಮಿಲಿಯನ್ ನಾಗರಿಕರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಿದ್ದು, ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ.
25 ವರ್ಷಗಳ ಬಳಿಕ ಗಾಝಾದಲ್ಲಿ ಮೊದಲ ಪೋಲಿಯೊ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಪೋಲಿಯೊ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆ. ಸುಮಾರು 11 ತಿಂಗಳ ಯುದ್ಧದಿಂದ ಧ್ವಂಸಗೊಂಡಿರುವ ಗಾಝಾದಲ್ಲಿ 6.4 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಸೆಂಟ್ರಲ್ ಗಾಝಾದಲ್ಲಿ ಸೆ.1 ರಿಂದ 3ರವರೆಗೆ ನಡೆಸಿದ ಮೊದಲ ಹಂತದ ಅಭಿಯಾನದಲ್ಲಿ 10 ವರ್ಷದೊಳಗಿನ 1.87 ಲಕ್ಷಕ್ಕೂ ಹೆಚ್ಚಿನ ಮಕ್ಕಳನ್ನು ತಲುಪಲಾಗಿದೆ ಎಂದು WHO ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಗಾಝಾ ಪಟ್ಟಿಯಲ್ಲಿನ ಭೀಕರ ಪರಿಸ್ಥಿತಿಗಳ ಹೊರತಾಗಿಯೂ ಅಭಿಯಾನವನ್ನು ಯಶಸ್ವಿಗೊಳಿಸಿದ ಎಲ್ಲಾ ಕುಟುಂಬಗಳು, ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಇದಲ್ಲದೆ ಗಾಝಾದಲ್ಲಿ ಯುದ್ಧ ವಿರಾಮದ ಕರೆಯನ್ನು ಪುನರುಚ್ಚರಿಸುವುದಾಗಿ ಹೇಳಿದ್ದಾರೆ.