ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಅಂತದ್ದೇ ಬಿರುಗಾಳಿ ಏಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೇರಳದ ಸಿನಿಮಾ ಇಂಡಸ್ಟ್ರಿಯಲ್ಲಿ ಹೇಮಾ ಕಮಿಟಿ ರಚನೆಯಾದ ಹಾಗೇ ನಮ್ಮಲ್ಲೂ ಕನ್ನಡ ಚಲನ ಚಿತ್ರರಂಗದಲ್ಲೂ ಅಂತಹದೇ ಕಮಿಟಿ ರಚನೆ ಆಗಬೇಕು ಅನ್ನೋ ಕೂಗು ಕೇಳಿ ಬಂದಿದೆ.
ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ಮಾಡಲು ಒತ್ತಾಯ ಕೇಳಿಬಂದ ಬೆನ್ನಲ್ಲೇ ‘ಫೈರ್’ ಟೀಂ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿದ್ದಾರೆ. ಈ ವೇಳೆ ನಟ ಚೇತನ್ ಅಹಿಂಸಾ, ಕವಿತಾ ಲಂಕೇಶ್, ಕವಿತಾ ಲಂಕೇಶ್, ನಟಿ ನೀತು, ಶೃತಿ ಹರಿಹರನ್ ಸೇರಿದಂತೆ ಇನ್ನೂ ಕೆಲವರು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಸೆಟ್ನಲ್ಲಿ ಹೆಣ್ಣುಮಕ್ಕಳಿಗೆ ಸಮಾನ ಸೌಲಭ್ಯ ಒದಗಿಸಬೇಕು. ಹೆಣ್ಣು ಎಂಬ ಕಾರಣಕ್ಕೇ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನ ಮೊದಲು ತಪ್ಪಿಸಬೇಕು. ನಟಿಯರೂ ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾನತೆ. ಸುರಕ್ಷಿತ ವ್ರತ್ತಿಪರ ವಾತಾವರಣ ನಿರ್ಮಿಸುವ ದಿಕ್ಕಿನಲ್ಲಿ ಕೇರಳದ ನ್ಯಾ.ಹೇಮ ಸಮಿತಿಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ಸಮಿತಿ ರಚನೆ ಆಗಬೇಕು. ಕನ್ನಡ ಚಿತ್ರರಂಗದಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸಿ, ನಿಗದಿತ ಕಾಲಮಿತಿಯಲ್ಲಿ ವರದಿ ಪಡೆದು, ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಲಿಂಗಸಂವೇದನೆಯುಳ್ಳವರ ನೇತೃತ್ವದಲ್ಲಿಯೇ ತನಿಖೆಯಾಗಬೇಕು. ಹೆಣ್ಮಕ್ಕಳನ್ನು ಕೀಳಾಗಿ, ಅಸಮಾನತೆಯಿಂದ ಕಂಡ ಪ್ರಮುಖರನ್ನ ತನಿಖೆಗೆ ಒಳಪಡಿಸಬೇಕು. ಅವಕಾಶಕ್ಕಾಗಿ ಕಮಿಟ್ಮೆಂಟ್ ಇರುತ್ತೆ ಎಂದು ದೌರ್ಜನ್ಯ ಎಸಗಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.