ಗಾಂಧೀನಗರ: ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾರವರು ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಬರೆದಿದ್ದಾರೆ. ಇದೀಗ ಪತಿ ಬಿಜೆಪಿಗೆ ಸೇರ್ಪಡೆಗೊಂಡ ಫೋಟೋವನ್ನು ಪತ್ನಿ, ಗುಜರಾತ್ ಶಾಸಕಿ ರಿವಾಬಾ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ದೇಶಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಿದೆ. ಈ ಅಭಿಯಾನದ ಭಾಗವಾಗಿ ಜಡೇಜಾ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ರವೀಂದ್ರ ಜಡೇಜಾ ಎಲ್ಲಿಯೂ ಅಧಿಕೃತವಾಗಿ ತಿಳಿಸಿಲ್ಲ.
ರಿವಾಬಾ 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಜಾಮ್ನಗರ್ ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿದು ಆಪ್ ಅಭ್ಯರ್ಥಿ ಕರ್ಶನ್ಬಾಯ್ ಕಾರ್ಮುರ್ ರವರನ್ನು ಸೋಲಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ತವರಾದ ಗುಜರಾತ್ನಲ್ಲಿ ಭಾರತೀಯ ಜನತಾ ಪಕ್ಷ 2 ಕೋಟಿ ಪ್ರಾಥಮಿಕ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ.