ಹಾಸನ: ಮುಖ್ಯಮಂತ್ರಿ ಆಗಬೇಕೆಂದು ಶಾಸಕ ದೇಶಪಾಂಡೆ ಒಬ್ಬರೇ ಅಲ್ಲ ದೊಡ್ಡಪಟ್ಟಿಯೇ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಕಲೇಶಪುರ ತಾಲೂಕು ಹೆಬ್ಬನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುರ್ಚಿ ಖಾಲಿ ಇದ್ದರೆ ಕೇಳಬೇಕು. ಸಿಎಂ ಕುರ್ಚಿ ಇರೋದು ಒಂದೇ ಅದು ಭರ್ತಿಯಾಗಿದೆ. ಬಹಳಷ್ಟು ಕುರ್ಚಿಗಳಿದ್ದರೆ ಕೇಳಬಹುದಿತ್ತು ಎಂದು ವ್ಯಂಗ್ಯವಾಡಿದರು.
ದೇಶಪಾಂಡೆ ಅವರು ಸಿದ್ದರಾಮಯ್ಯ ಒಪ್ಪಿದ್ರೆ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ. ಆದರೆ ಹೈಕಮಾಂಡ್ ಒಪ್ಪಿದ್ರೆ ಮುಖ್ಯಮಂತ್ರಿ ಆಗೋದು. ಇದು ಪಕ್ಷದ ನಿಯಮ ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ ಎಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ಪ್ರಬಲ ನಾಯಕ. ದೇವರಾಜ ಅರಸು, ಬಂಗಾರಪ್ಪ ಅವರ ನಂತರ ಅಹಿಂದ ವರ್ಗದ ಜನಪ್ರಿಯ ಲೀಡರ್.
ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ 40 ವರ್ಷ ರಾಜಕಾರಣ ಮಾಡಿದ್ದಾರೆ. ಏನಾದರೂ ಮಾಡಿ ಅವರ ಹೆಸರಿಗೆ ಮಸಿ ಬಳಿದು, ಅವರ ಜನಪ್ರಿಯತೆ ಕಡಿಮೆ ಮಾಡಬೇಕು. ಹಾಗಾದರೆ ಕಾಂಗ್ರೆಸ್ ಶಕ್ತಿ ಕುಂದಲಿದೆ. ಆ ದೃಷ್ಟಿಯಿಂದ ಅವರನ್ನು ಟಾರ್ಗೆಟ್ ಮಾಡ್ತಿದ್ದಾರೆ ಅದು ಸರಿಯಾದುದಲ್ಲ. ರಾಜಕಾರಣದಲ್ಲಿ ವೈಯಕ್ತಿಕ ತೇಜೋವಧೆ ಮಾಡುವ ಕೆಲಸ ಯಾರೂ ಯಾರಿಗೂ ಮಾಡಬಾರದು ಎಂದು ಹೇಳಿದರು.