ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವ (Bengaluru Karaga Mahotsav) ಕ್ಕೆ ದಿನಾಂಕ ನಿಗದಿಯಾಗಿದೆ. 2023ರ ಕರಗ ಉತ್ಸವ 11 ದಿನಗಳ ಕಾಲ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ನಡೆದಿದ್ದು, ಬಿಬಿಎಂಪಿ (BBMP) ಕೂಡ ಅನುದಾನ ಬಿಡುಗಡೆ ಒಪ್ಪಿದೆ.
ಇದೇ ತಿಂಗಳ 29 ರಿಂದ ಕರಗ ಆರಂಭ ಆಗಲಿದ್ದು, 11 ದಿನಗಳ ಕಾಲ ಕರಗೋತ್ಸವ ನಡೆಯಲಿದೆ. ಐತಿಹಾಸಿಕ ಬೆಂಗಳೂರು ಕರಗಕ್ಕೆ ಭರಾಟೆ ಸಿದ್ಧತೆ ನಡೆದಿದೆ. ಬೆಂಗಳೂರು ಕರಗ ಮಹೋತ್ಸವಕ್ಕೆ ರಾಜ್ಯ, ದೇಶ, ವಿದೇಶಗಳಿಂದ ಜನ ಆಗಮಿಸಿ ಕರಗೋತ್ಸೋವಕ್ಕೆ ಸಾಕ್ಷಿಯಾಗಲಿದ್ದಾರೆ.
11 ದಿನಗಳ ಕಾಲ ಕರಗ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಾರ್ಚ್ 29 ರಥೋತ್ಸವ ದ್ವಜಾರೋಹಣ, ಮಾ. 30-ಏ.2ರವರೆಗೆ ವಿಶೇಷ ಪೂಜೆ;ಮಹಾಮಂಗಳಾರತಿ, ಏಪ್ರಿಲ್ 03 – ಆರತಿ ಕಾರ್ಯಕ್ರಮ, ಏಪ್ರಿಲ್ 04 – ಹಸಿ ಕರಗ, ಏಪ್ರಿಲ್ 05 – ಹೊಂಗಲು ಸೇವೆ ಹಾಗೂ ಏಪ್ರಿಲ್ 06 – ಕರಗ ಶಕ್ತ್ಯೋತ್ಸವ ನಡೆಯಲಿದೆ.
ಮಸ್ತಾನ್ ದರ್ಗಾಕ್ಕೆ ಕರಗ ಸಾಗಬಾರದು ಅಂತಾ ಕೆಲವರು ವಿರೋಧ ಮಾಡುತ್ತಿದ್ದಾರೆ. ಕರಗ ಸಮಿತಿ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ. ಮಸ್ತಾನ್ ದರ್ಗಾಕ್ಕೆ ಹೋಗಬಾರದು ಅನ್ನೋದು ಸರಿಯಲ್ಲ. ಪರಂಪರೆಯಿಂದ ನಡೆದುಕೊಂಡು ಬಂದಿರೋದನ್ನ ತಪ್ಪಿಸೋಕೆ ಆಗಲ್ಲ ಎಂದಿದ್ದಾರೆ.
ಬೆಂಗಳೂರು ಕರಗ ಸಮಿತಿ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಸಭೆ ನಡೆಸಿದರು. ಕರಗ ಸಾಗುವ ರಸ್ತೆಯಲ್ಲಿ ಸ್ವಚ್ಛ ಮಾಡಲು ಬಿಬಿಎಂಪಿಗೆ ಕರಗ ಸಮಿತಿ ಮನವಿ ಮಾಡಿಕೊಂಡಿದೆ. ಕರಗೋತ್ಸವಕ್ಕೆ ಬಿಬಿಎಂಪಿ 40.35 ಲಕ್ಷ ನೀಡೋದಾಗಿ ತಿಳಿಸಿದೆ. ಆರ್ಥಿಕ ವರ್ಷ ಮಾರ್ಚ್ಗೆ ಕೊನೆಗೊಳ್ಳುತ್ತಿದ್ದು, ಉಳಿದ 75 ಲಕ್ಷ ಹಣ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡೋದಾಗಿ ಬಿಬಿಎಂಪಿ ಆಯುಕ್ತರು ಭರವಸೆ ನೀಡಿದೆ.