ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ‘ಗಣಪತಪ.. ಐಸಾ.. ಅವನ ಹೊಟ್ಟೆ ನೋಡಿ.. ಅವನ ಸೊಂಡಿಲು ನೋಡಿ.. ಐಸಾ’ ಎಂದು ಗಣೇಶನ ರೂಪ ವರ್ಣಿಸುವುದು. ‘ಗಣೇಶ ಬಂದ.. ಕಾಯಿ ಕಡುಬು ತಿಂದ.. ಚಿಕ್ಕ ಕೆರೆಯಲ್ಲಿ ಬಿದ್ದ.. ದೊಡ್ಡ ಕೆರೆಯಲ್ಲಿ ಎದ್ದ’ ಎಂದು ಕೂಗುತ್ತಾ ಸಂಭ್ರಮದಿಂದ ಎಲ್ಲೆಲ್ಲೂ ಹಬ್ಬ ಆಚರಿಸುತ್ತಾರೆ.
ತಿಂಗಳಾನುಗಟ್ಟಲೆ ಗಣೇಶನನ್ನು ಕೂರಿಸಿ ಹಬ್ಬ ಆಚರಿಸುವುದು ವಾಡಿಕೆ. ದೇವಾಲಯ-ಚಪ್ಪರಗಳ ಅಲಂಕಾರ, ಸಂಗೀತ ಕಾರ್ಯಕ್ರಮ, ರುಚಿಕರವಾದ ಸಿಹಿತಿಂಡಿಗಳ ತಯಾರಿಯು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಗಣೇಶ ಚತುರ್ಥಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಆಚರಿಸುವ ವಿಧಾನದಲ್ಲಿ ವ್ಯತ್ಯಾಸಗಳಿವೆ. ಮಹಾರಾಷ್ಟ್ರದಲ್ಲಿ ಪ್ರತಿಯೊಂದು ಕುಟುಂಬವೂ ತಮ್ಮ ಪ್ರಕಾರದ ಗಣೇಶ ಚತುರ್ಥಿಯನ್ನು ಆಚರಿಸುತ್ತವೆ. ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಹಬ್ಬ ಆಚರಣೆ ಇರುತ್ತದೆ. ಮಹಾರಾಷ್ಟ್ರವು ಗಣೇಶೋತ್ಸವಕ್ಕೆ ದೇಶದಲ್ಲೇ ಹೆಸರುವಾಸಿಯಾಗಿದೆ.
ಎಲ್ಲೆಲ್ಲೆ ಆಚರಣೆ ಹೇಗೆ?
ಮಹಾರಾಷ್ಟ್ರ:
ಗಣೇಶ ಚತುರ್ಥಿಯ ಸಮಯದಲ್ಲಿ ಕನಸಿನ ನಗರ ಮುಂಬೈ, ಸಾಂಸ್ಕೃತಿಕ ಹಾಟ್ಸ್ಪಾಟ್ ಆಗಿ ಬದಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ನಗರದ ಉತ್ಸಾಹವು ಅಪ್ರತಿಮವಾಗಿರುತ್ತದೆ. ಮನೆಗಳಲ್ಲಿ ಮತ್ತು ಸಾರ್ವಜನಿಕ ಪೆಂಡಲ್ಗಳಲ್ಲಿ ಸುಂದರವಾಗಿ ರಚಿಸಲಾದ ಸಾವಿರಾರು ಗಣೇಶನ ಮೂರ್ತಿಗಳನ್ನು ಕೂರಿಸಲಾಗುತ್ತದೆ. ಬೃಹತ್ ಗಣೇಶ ಮೂರ್ತಿಗಳಿಗೆ ಭವ್ಯ ಅಲಂಕಾರ ಮಾಡಿ, ಅದ್ಭುತ ಮೆರವಣಿಗೆಯೊಂದಿಗೆ ನಗರಕ್ಕೆ ಜೀವ ತುಂಬುತ್ತವೆ. ‘ಗಣಪತಿ ಬಪ್ಪಾ ಮೋರಿಯಾ.. ಮಂಗಲ್ ಮೂರ್ತಿ ಮೋರಿಯಾ ಎಂಬ ಜೋರಾದ ಘಂಟಾಘೋಷಗಳೊಂದಿಗೆ ಮುಂಬೈ ನಗರವು ಹಬ್ಬದ ಕಳೆಯನ್ನು ತರುತ್ತದೆ. ವರ್ಣರಂಜಿತ ಮೆರವಣಿಗೆಗಳು, ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುತ್ತವೆ. ‘ವಿಸರ್ಜನ್’ ಎಂಬ ದೊಡ್ಡ ಇಮ್ಮರ್ಶನ್ ಮೆರವಣಿಗೆಯೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.
ಕರ್ನಾಟಕ:
ಕರ್ನಾಟಕದಲ್ಲಿ ‘ಗಣೇಶ ಹಬ್ಬ’ವನ್ನು ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಇಲ್ಲಿ ಗಣೇಶ ಚತುರ್ಥಿಯನ್ನು ಹಲವಾರು ಸಾಂಸ್ಕೃತಿಕ ಮತ್ತು ಧಾರ್ಮಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಗಣೇಶ ಹಬ್ಬದಂದು ಮೊದಲು ಗಣೇಶನ ತಾಯಿ ಗೌರಿಯ ಆಗಮನವಾಗುತ್ತದೆ. ನಂತರ ಗಣೇಶನನ್ನು ಕೂರಿಸಲಾಗುತ್ತದೆ. ಹಬ್ಬದ ದಿನಗಳಂದು ಪಾಯಸ, ಗೊಜ್ಜು, ಮೋದಕ ಮುಂತಾದ ಸಿಹಿತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯ ಇಡಲಾಗುತ್ತದೆ. ಪೂಜೆ, ಭಜನೆ,
ಗೋವಾ:
ಗೋವಾದಲ್ಲಿ ‘ಚವತ್’ ಆಚರಣೆಯ ಸಂಪ್ರದಾಯವಿದೆ. ಮಹಾರಾಷ್ಟ್ರದಂತೆಯೇ ನೆರೆಯ ರಾಜ್ಯ ಗೋವಾ ಕೂಡ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸುತ್ತದೆ. ಹಬ್ಬದಂದು ಜನರು ಮನೆಗಳನ್ನು ಶುಚಿಗೊಳಿಸಿ, ಗಣೇಶನನ್ನು ಕೂರಿಸುತ್ತಾರೆ. ಹಬ್ಬ ಆಚರಣೆಯಲ್ಲಿ ಕುಟುಂಬದವರು ಪರಸ್ಪರ ಸೇರುತ್ತಾರೆ. ಗೋವಾದ ಆಚರಣೆಗಳಲ್ಲಿ ಧಾರ್ಮಿಕ ಪೂಜೆ, ಆರತಿ ಬೆಳಗುವುದು, ದೇವರ ಕುರಿತು ಹಾಡುವುದು, ‘ನೆವ್ರಿ’ ಮತ್ತು ‘ಪಟೋಲಿಯೊ’ನಂತಹ ರುಚಿಕರವಾದ ಸ್ಥಳೀಯ ಸಿಹಿತಿಂಡಿಗಳನ್ನು ತಯಾರಿಸುವುದು ಇರುತ್ತದೆ. ಗೋವಾದಲ್ಲಿ ರಜಾದಿನವು ಎರಡು ದಿನಗಳವರೆಗೆ ಇರುತ್ತದೆ. ಎರಡನೇ ದಿನ ಗಣೇಶ ಮೂರ್ತಿಯನ್ನು ಹತ್ತಿರದ ನದಿಗಳು, ಬಾವಿಗಳು ಅಥವಾ ಸರೋವರಗಳಲ್ಲಿ ವಿಸರ್ಜಿಸುತ್ತಾರೆ. ಗೋವಾದಲ್ಲಿ ‘ದಶಾವತಾರ್’ ಸಾಂಸ್ಕೃತಿಕ ಕಾರ್ಯಕ್ರಮದ ಪದ್ಧತಿ ಇದೆ.
ತಮಿಳುನಾಡು:
ತಮಿಳುನಾಡಿನಲ್ಲಿ ಗಣೇಶ ಚತುರ್ಥಿಯನ್ನು ‘ವಿನಾಯಕ ಚತುರ್ಥಿ’ ಎಂದು ಕರೆಯಲಾಗುತ್ತದೆ. ಗಣೇಶನನ್ನು ಪೂಜಿಸುವ ಜನರು ತಮ್ಮ ಮನೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಮೂರ್ತಿಗಳನ್ನು ಕೂರಿಸುತ್ತಾರೆ. ಗಣೇಶನ ಪೂಜೆಗಾಗಿಯೇ ಇಲ್ಲಿ ಪ್ರಸಿದ್ಧ ‘ಪಿಳ್ಳೇರ್’ ದೇವಾಲಯಗಳಿವೆ. ಮೂರ್ತಿಗಳ ಅಲಂಕಾರಕ್ಕೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ‘ಕೋಝುಕಟ್ಟೈ’ (ಮೋದಕ) ಸಿಹಿ ತಿಂಡಿಗಳನ್ನು ಮಾಡುತ್ತಾರೆ. ವಿನಾಯಕ ಸುಪ್ರಭಾತಂ ಎಂಬ ಮುಂಜಾನೆ ಹಾಡುಗಳನ್ನು ಹಾಡಲಾಗುತ್ತದೆ. ಚೆನ್ನೈ ಮತ್ತು ಇತರೆ ಸ್ಥಳಗಳಲ್ಲಿ ಆಚರಣೆ ಜೋರಾಗಿರುತ್ತದೆ.
ಆಂಧ್ರ-ತೆಲಂಗಾಣ:
ಈ ರಾಜ್ಯಗಳಲ್ಲಿ ‘ವಿನಾಯಕ ಚವಿತಿ’ ಎಂದು ಹಬ್ಬ ಆಚರಿಸಲಾಗುತ್ತದೆ. ಜನರು ಮನೆಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜೇಡಿಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಕೂರಿಸಿ ಪೂಜಿಸುತ್ತಾರೆ. ವಿಶೇಷ ಪ್ರಾರ್ಥನೆಗಳು, ಆರತಿಗಳು ಮತ್ತು ಭಜನೆಗಳನ್ನು ಪಠಿಸುವ ಮೂಲಕ ಗಣೇಶನನ್ನು ಆರಾಧಿಸುತ್ತಾರೆ. ಹೈದರಾಬಾದ್ನಲ್ಲಿ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಲಾಗುತ್ತದೆ. ದೇಶದ ಅತ್ಯಂತ ದೊಡ್ಡ ಮತ್ತು ಅತ್ಯಂತ ಪ್ರಸಿದ್ಧವಾದ ಗಣೇಶ ಮೂರ್ತಿಗಳಲ್ಲಿ ಒಂದು ಖೈರತಾಬಾದ್ನಲ್ಲಿದೆ. ಕೊನೆಯ ದಿನ ಹೈದರಾಬಾದ್ನಲ್ಲಿ ನಿಮಜ್ಜನ ಮೆರವಣಿಗೆಗಳು ಅದ್ಧೂರಿಯಾಗಿ ಜರುಗುತ್ತವೆ.
ಪಶ್ಚಿಮ ಬಂಗಾಳ-ಒಡಿಶಾ:
ಗಣೇಶ ಚತುರ್ಥಿಯನ್ನು ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವಿಶೇಷವಾಗಿ ನಗರಗಳಲ್ಲಿ ಹೆಚ್ಚು ಸಂಭ್ರಮದಿAದ ಆಚರಿಸಲಾಗುತ್ತದೆ. ಒಡಿಶಾದಲ್ಲಿ ಮಕ್ಕಳ ಶಾಲಾ ವರ್ಷದ ಪ್ರಾರಂಭದೊಂದಿಗೆ ಗಣೇಶ ಹಬ್ಬ ಸಮ್ಮಿಲನ ಹೊಂದಿದೆ. ಮಕ್ಕಳಲ್ಲಿ ಜ್ಞಾನ ಮತ್ತು ಬುದ್ದಿವಂತರಾಗಲಿ ಎಂಬ ಕಾರಣಕ್ಕೆ ಈ ಸಂದರ್ಭದಲ್ಲಿ ಆಚರಿಸುತ್ತಾರೆ.
ಗುಜರಾತ್:
ಈ ರಾಜ್ಯದಲ್ಲೂ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಮೋದಕ, ಸಿಹಿತಿಂಡಿಗಳನ್ನು ಗಣೇಶನಿಗೆ ನೈವೇದ್ಯವಾಗಿ ತಯಾರಿಸುತ್ತಾರೆ. ಅಹಮದಾಬಾದ್ ಮತ್ತು ಸೂರತ್ನಂತಹ ಸ್ಥಳಗಳಲ್ಲಿ ಹೆಚ್ಚೆಚ್ಚು ಜನರು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುತ್ತಾರೆ. ವಿಸರ್ಜನೆ ದಿನ ಬೃಹತ್ ಮೆರವಣಿಗೆ ನಡೆಯುತ್ತದೆ. ಹಬ್ಬದಂದು ದೇವಾಲಯಗಳು ಅಲಂಕಾರದೊಂದಿಗೆ ಕಂಗೊಳಿಸುತ್ತವೆ. ವಿಶೇಷ ಪೂಜೆಗಳು ನಡೆಯುತ್ತವೆ.