ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿಲ್ಲ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಭಾಷಣ ಮಾಡುವವರ ಪರಿಷ್ಕೃತ ತಾತ್ಕಾಲಿಕ ಪಟ್ಟಿಯಲ್ಲಿ ಮೋದಿ ಹೆಸರು ಇಲ್ಲ. ಬದಲಾಗಿ ಜೈಶಂಕರ್ ಭಾಷಣ ಮಾಡುತ್ತಿದ್ದಾರೆ.
ಸೆ. 22ರಂದು ಲಾಂಗ್ ಐಲ್ಯಾಂಡ್ನ ನಾಸೂ ವೆಟೆರನ್ಸ್ ಮೆಮೊರಿಯಲ್ ಕೊಲಿಸಿಯಂನಲ್ಲಿ ನಡೆಯಲಿರುವ ಸಮುದಾಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ಗೆ ತೆರಳಲಿದ್ದಾರೆ. ಬಳಿಕ ಸೆ.22 ಹಾಗೂ 23ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ವಾರ್ಷಿಕ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಈ ಹಿಂದೆ ನಿಗದಿಯಾಗಿತ್ತು.
ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವವರ ತಾತ್ಕಾಲಿಕ ಪಟ್ಟಿಯನ್ನು ವಿಶ್ವಸಂಸ್ಥೆ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ ಸೆಪ್ಟೆಂಬರ್ 26ರಂದು ನಡೆಯಲಿರುವ ಉನ್ನತ ಮಟ್ಟದ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವವರಿದ್ದರು. ಆದರೆ ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ಪಟ್ಟಿಯಲ್ಲಿ, ಸೆಪ್ಟೆಂಬರ್ 28ರಂದು ನಡೆಯುವ ಸಂವಾದದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಲಿದ್ದಾರೆ.
ಸೆಪ್ಟೆಂಬರ್ 24ರಿಂದ 30ರವರಗೆ 79ನೇ ಸಾಮಾನ್ಯ ಅಧಿವೇಶನ ನಡೆಯಲಿದ್ದು, ಬ್ರೆಜಿಲ್ನ ಪ್ರತಿನಿಧಿ ಪ್ರಥಮವಾಗಿ ಭಾಷಣ ಮಾಡಲಿದ್ದಾರೆ. ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಲಿದ್ದಾರೆ.