ಬೆಂಗಳೂರು:- ಬಿ.ವೈ. ವಿಜಯೇಂದ್ರರ ನಾಯಕತ್ವವನ್ನು ಬಿಜೆಪಿ ನಾಯಕರು ಒಪ್ಪಿಕೊಂಡಿಲ್ಲ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ವಿಜಯೇಂದ್ರ ಹೆಚ್ಚಿನ ದಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವುದಿಲ್ಲ. ಶೀಘ್ರದಲ್ಲಿಯೇ ಅವರು ಆ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಆರ್.ಅಶೋಕ್ ಮತ್ತು ಅಶ್ವತ್ಥ ನಾರಾಯಣ್ ಅವರು, ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಂಡಿಲ್ಲ ಎಂದರು.
ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಮಾತನಾಡುವ ವಿಜಯೇಂದ್ರ, ಅವರ ತಂದೆ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೇಗೆ ಕೆಳಗಿಳಿಸಲಾಯಿತು ಎಂಬಂತಹ ಅನೇಕ ಮಾಹಿತಿಗಳನ್ನು ಅರಿಯಬೇಕು. ಅವರ ತಂದೆಯನ್ನು ಅವರ ಪಕ್ಷದ ನಾಯಕರೇ ಅಧಿಕಾರದಿಂದ ಕೆಳಗಿಳಿಸಿದರು. ಇದನ್ನು ಮೊದಲು ಅವರು ತಿಳಿಯಬೇಕು ಎಂದರು.
ಮುಡಾ ಪ್ರಕರಣ ಕುರಿತು ಮಾತನಾಡಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಏನೂ ಇಲ್ಲದ ಕಾರಣ ರಾಜ್ಯ ಸರ್ಕಾರ ಈ ವಿವಾದವನ್ನು ಬೇರೆಡೆಗೆ ತಿರುಗಿಸುವ ಅಗತ್ಯವಿಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ದುರ್ಬಳಕೆ ಮಾಡಿದೆ. ಹಾಸಿಗೆ ಮತ್ತು ಪಿಪಿಇ ಕಿಟ್ಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಜನರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಮಯದಲ್ಲಿ ಹಣ ದುರುಪಯೋಗದ ಬಗ್ಗೆ ಜನರು ಬಿಜೆಪಿಯನ್ನು ಪ್ರಶ್ನಿಸಬೇಕು. ಬಿಜೆಪಿ ಸರ್ಕಾರ ಮಾಡಿದ ಕೋವಿಡ್ ಹಗರಣದ ಬಗ್ಗೆ ಪ್ರಲ್ಹಾದ್ ಜೋಶಿ ಜನರಿಗೆ ತಿಳಿಸಬೇಕು. ಈ ಬೃಹತ್ ಮೊತ್ತವನ್ನು ಬಿಜೆಪಿ ತಮ್ಮ ಚುನಾವಣೆಗೆ ಬಳಸಿಕೊಂಡಿದೆ. ಸಾವಿರಾರು ಜನರು ಸಾಯುತ್ತಿದ್ದ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿರುವುದನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಮುಡಾ ಪ್ರಕರಣವನ್ನು ನ್ಯಾಯಾಲಯವು ನಿರ್ಧರಿಸಲಿ ಎಂದರು.