ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ , ಬಜರಂಗ್ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಈ ಬೆನ್ನಲ್ಲೇ ಹರಿಯಾಣ ಚುನಾವಣೆಯಲ್ಲಿ ವಿನೇಶ್ಗೆ ಕಾಂಗ್ರೆಸ್ಗೆ ಟಿಕೆಟ್ ಘೋಷಣೆಯಾಗಿದೆ. ಪುನಿಯಾಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಈ ವಿಚಾರವಾಗಿ ಲೈಂಗಿಕ ಕಿರುಕುಳ ಆರೋಪಿ, ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಿಡಿದೆದ್ದಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕುಸ್ತಿಪಟುಗಳನ್ನು ಕಾಂಗ್ರೆಸ್ ದಾಳವಾಗಿ ಬಳಸಿಕೊಂಡಿದೆ. ರೆಸ್ಲರ್ಗಳು ಪ್ರತಿಭಟನೆ ಆರಂಭಿಸಿದ ದಿನವೇ, ಇದರ ಹಿಂದೆ ಕಾಂಗ್ರೆಸ್ ಪಾತ್ರವಿದೆ ಎಂದು ಹೇಳಿದ್ದೆ. ಈಗ ಅದೇ ನಿಜವಾಗಿದೆ. ಕಾಂಗ್ರೆಸ್ ಸಂಚಿಗೆ ವಿನೇಶ್ ಮತ್ತು ಬಜರಂಗ್ ದಾಳವಾಗಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಪಕ್ಷ ಇಂತಹ ಕೆಲಸಗಳನ್ನು ಮಾಡುತ್ತಲೇ ಇರಯತ್ತದೆ. ಇದಕ್ಕಾಗಿ ಭೂಪಿಂದರ್ ಹೂಡಾ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕುಟುಂಬ ಕುಸ್ತಿಪಟುಗಳನ್ನು ದಾಳವಾಗಿ ಬಳಸಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ. ಈ ವೇಳೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಂತಿಮ ಹಂತದಲ್ಲಿ ಅನರ್ಹಗೊಂಡ ವಿನೇಶ್ಗೆ ದೇವರೇ ಶಿಕ್ಷೆ ನೀಡಿದ್ದಾನೆ ಎಂದು ಬ್ರಿಜ್ಭೂಷಣ್ ಹೇಳಿದ್ದಾರೆ.