ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು (ಸೆಪ್ಟೆಂಬರ್ 08) ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ನ ಆಸ್ಪತ್ರೆಗೆ ದಾಖಲಾಗಿದ್ದರು. ಮದುವೆಯಾದ ಆರು ವರ್ಷದ ಬಳಿಕ ದೀಪಿಕಾ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ.
ದೀಪಿಕಾ ಪಡುಕೋಣೆಗೆ ಸೆಪ್ಟೆಂಬರ್ 28 ಗೆ ಹೆರಿಗೆ ದಿನಾಂಕ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸೆಪ್ಟೆಂಬರ್ 08 ರಂದು ಈ ಜೋಡಿಗೆ ಮಗುವಾಗಿದೆ. ಮದುವಿನ ಆಗಮನದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ದೀಪಿಕಾ ಸ್ಪಷ್ಟಪಡಿಸಿದ್ದಾರೆ.
ದೀಪಿಕಾ ಪಡುಕೋಣೆ ‘ಕಲ್ಕಿ’ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ತಾವು ಗರ್ಭಿಣಿ ಆಗಿರುವ ವಿಷಯ ಬಹಿರಂಗಪಡಿಸಿದ್ದರು. ಗರ್ಭಿಣಿ ಆಗಿರುವ ಸಂದರ್ಭದಲ್ಲಿಯೇ ಅವರು ‘ಕಲ್ಕಿ 2898’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ರಣ್ವೀರ್ ಸಿಂಗ್ ಸಹ ದೀಪಿಕಾ ಗರ್ಭಿಣಿ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ ಪತ್ನಿಯೊಟ್ಟಿಗೆ ಹೆಚ್ಚು ಸಮಯ ಕಳೆಯಲು ತೊಡಗಿದರು.
ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಹಲವು ಪ್ರದೇಶಗಳಿಗೆ ಪ್ರವಾಸ ತೆರಳಿದರು. ದೀಪಿಕಾ, ತಮ್ಮ ತವರವರಾದ ಬೆಂಗಳೂರಿನಲ್ಲಿ ಸಹ ಸಾಕಷ್ಟು ಸಮಯ ಕಳೆದಿದ್ದರು. ದೀಪಿಕಾರ ಹೆರಿಗೆ ಲಂಡನ್ನಲ್ಲಿ ಆಗಲಿದೆ. ಅಲ್ಲಿಯೇ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಮುಂಬೈನಲ್ಲಿಯೇ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಿನ್ನೆ ಗಣೇಶ ಚತುರ್ಥಿಯಂದು ಮುಂಜಾನೆ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ಗಣೇಶ ದೇವಾಲಯಕ್ಕೆ ತೆರಳಿ ಆಶೀರ್ವಾದ ಪಡೆದರು. ಅದೇ ದಿನ ಸಂಜೆ ವೇಳೆಗೆ ರಣ್ವೀರ್ ಸಿಂಗ್ ದೀಪಿಕಾ ಮತ್ತು ಇಬ್ಬರ ಕುಟುಂಬದವರು ಮುಂಬೈನ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಸಂಜೆಯೇ ದೀಪಿಕಾಗೆ ಮಗು ಜನನವಾಗಲಿದೆ ಎನ್ನಲಾಗಿತ್ತು. ಆದರೆ ಇಂದು ದೀಪಿಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ .