ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಇಂದಿಗೆ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು ಮತ್ತೆ ಕೋರ್ಟ್ ಗೆ ತೆರಳಲಿದ್ದಾರೆ. ಈ ಮಧ್ಯೆ ದರ್ಶನ್ ಹಾಗೂ ಗ್ಯಾಂಗ್ ಒಂದು ದೊಡ್ಡ ಸಂಚು ರೂಪಿಸಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಆದರೆ, ದರ್ಶನ್ ಹಾಗೂ ಅವರ ಆಪ್ತರು ಮಾಡಿದ ಲಾಬಿಗೆ ಸರ್ಕಾರ ಕಿಮ್ಮತ್ತು ಕೊಡಲಿಲ್ಲ. ಈ ಮೊದಲು ದರ್ಶನ್ ಜೈಲಿನಲ್ಲಿ ಸವಲತ್ತು ಪಡೆದಿದ್ದ ವಿಚಾರ ಚರ್ಚೆ ಹುಟ್ಟುಹಾಕಿತ್ತು. ಈಗ ಅವರ ಮತ್ತೊಂದು ಕುತಂತ್ರ ಬಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ದರ್ಶನ್ ವಿರುದ್ಧ ವಾದ ಮಂಡಿಸುತ್ತಿದ್ದಾರೆ. ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಆಗಿ ನೇಮಕ ಮಾಡಿದ್ದು ದರ್ಶನ್ ಹಾಗೂ ಆಪ್ತ ಬಳಗಕ್ಕೆ ಆತಂಕ ತಂದಿದೆ. ವಕೀಲ ಪ್ರಸನ್ನ ಕುಮಾರ್ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಇದು ದರ್ಶನ್ ಚಿಂತೆಗೆ ಕಾರಣ ಆಗಿದೆ. ತಮ್ಮ ಆಪ್ತರ ಮೂಲಕ ಪ್ರಸನ್ನ ಕುಮಾರ್ ಅವರನ್ನು ಬದಲಾಯಿಸಲು ಕಸರತ್ತು ನಡೆಸಿದ್ದರು ಎನ್ನಲಾಗಿದೆ.
ದರ್ಶನ್ ಮತ್ತು ಆಪ್ತರು ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಲು ಮುಂದಾಗಿದ್ದರು. ದರ್ಶನ್ ಪ್ರಯತ್ನಕ್ಕೆ ಸರ್ಕಾರ ತಪರಾಕಿ ಕೊಟ್ಟಿದೆ. ಇವರ ಲಾಬಿಗೆ ಸರ್ಕಾರ ಮಣಿಯಲಿಲ್ಲ. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ‘ಎಸ್ಪಿಪಿ ಪ್ರಸನ್ನ ಕುಮಾರ್ ಬದಲಾಯಿಸುವ ಪ್ರಶ್ನೆಯೇ ಇಲ್ಲ’ ಎಂದು ಸರ್ಕಾರ ಹೇಳಿದೆ ಎಂಬುದಾಗಿ ವರದಿ ಆಗಿದೆ.