2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರಂಗೇರಿದೆ. ಜೋ ಬೈಡನ್ ಬಳಿಕ ಅವರ ಸ್ಥಾನಕ್ಕೆ ಯಾರು ಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಒಂದು ಕಡೆ ಕಮಲಾ ಹ್ಯಾರಿಸ್ ಇದ್ರೆ ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಫೈಪೋಟಿ ನೀಡಿದ್ದಾರೆ. ಈ ಮಧ್ಯೆ ಕಮಲಾ ಹ್ಯಾರಿಸ್ ಆಹ್ವಾನದ ಮೇರೆಗೆ ಡಿಕೆ ಶಿವಕುಮಾರ್ ಕುಟುಂಬ ಸಮೇತ ಅಮೆರಿಕಾಗೆ ತೆರಳಿದ್ದಾರೆ.
ಅಮೆರಿಕ ಅಧ್ಯಕ್ಷ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಜೊತೆ ಡಿಕೆಶಿ ನಂಟು ಹೊಂದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಸಿಎಂ ವಿರುದ್ಧ ಮುಡಾ ಕೇಸ್ ಪ್ರಾಸಿಕ್ಯೂಷನ್ ಶುರುವಾಗಿದ್ದೇ ಆಗಿದ್ದು, ರಾಜ್ಯ ಹಸ್ತಪಾಳಯದಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೀತಾ ಇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಸೇರಿದಂತೆ ಕೆಲವು ಘಟಾನುಘಟಿಗಳು ಸಿಎಂ ಕುರ್ಚಿಗಾಗಿ ಕಾಯ್ತಿದ್ದಾರೆ. ಆದರೆ ಇದ್ಯಾವುದರ ಟೆನ್ಷನ್ ಇಲ್ಲದೆ ಡಿಕೆಶಿ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ನಿನ್ನೆ ಸಂಜೆಯೇ ಕುಟುಂಬ ಸಮೇತ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮೊದಲು ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ, ಪ್ರವಾಸದ ಬಗ್ಗೆ ಮಾಹಿತಿ ನೀಡಿದ್ರು. ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ರು. ಸಿಎಂ ಕುರ್ಚಿಗಾಗಿ ಕೆಲವರು ಲಾಭಿ ನಡೆಸ್ತಿರೋ ಬಗ್ಗೆಯೂ ಗಂಭೀರ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಅಂದಾಗೆ ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಕೆಶಿ ಭಾಗಿಯಾಗಲಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷ ಚುನಾವಣೆಗೆ ನಿಂತಿರೋ ಭಾರತ ಮೂಲದ ಕಮಲಾ ಹ್ಯಾರಿಸ್ರನ್ನೂ ಭೇಟಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ. ಅಮೆರಿಕಾದಲ್ಲಿ ನಡೆಯಲಿರುವ ರಾಜತಾಂತ್ರಿಕ ಸಮಾವೇಶದಲ್ಲಿ ಡಿಸಿಎಂ ಭಾಗಿಯಾಗೋ ಸಾಧ್ಯತೆ ಇದೆ. ಅಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣೆ ಕುರಿತ ಸಂವಾದ ಆಯೋಜನೆ ಆಗಿದೆಯಂತೆ. ಇದರಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಭಾಗಿಯಾಗಲಿದ್ದಾರಂತೆ.