ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೆ ಇತ್ತು. ಆದರೆ ಈ ಬಗ್ಗೆ ಜಯಂ ರವಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರೋ ನಟ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ಮನವಿ ಮಾಡಿದ್ದಾರೆ.
ನನ್ನ ಆದ್ಯತೆ ಯಾವಾಗಲೂ ಒಂದೇ ಆಗಿರುತ್ತದೆ. ನನ್ನ ಪ್ರೀತಿಯ ಪ್ರೇಕ್ಷಕರಿಗೆ ಸಿನಿಮಾಗಳ ಮೂಲಕ ಮನರಂಜನೆ ನೀಡಿವುದನ್ನು ಮುಂದುವರೆಸುವುದು ಎಂದು ಜಯಂ ರವಿ ಬರೆದುಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡಿವೋರ್ಸ್ ಕುರಿತು ಅಧಿಕೃತವಾಗಿ ತಿಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಜೊತೆಗಾಗಿ ಇರಿ ಎಂದೆಲ್ಲಾ ಫ್ಯಾನ್ಸ್ ನಟನಿಗೆ ಮನವಿ ಮಾಡಿದ್ದಾರೆ.
2009ರಲ್ಲಿ ಆರತಿ ಹಾಗೂ ಜಯಂ ರವಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಇಬ್ಬರು ಗಂಡು ಮಕ್ಕಳು ಸಾಕ್ಷಿಯಾಗಿದ್ದಾರೆ.