‘ಸ್ಯಾಂಡಲ್ವುಡ್ ಕ್ವೀನ್’ ನಟಿ ರಮ್ಯಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ಈಕೆ ಹೆಸರು ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಅದರಲ್ಲೂ ರಮ್ಯಾ ಮದುವೆ ಮ್ಯಾಟರ್ ಕೇಳಿ ಬರ್ತಾ ಇರುತ್ತೆ. ಕಳೆದ ಎರಡು ದಿನಗಳಿಂದ ನಟಿ ರಮ್ಯಾ ಮದುವೆ ವಿಚಾರ ಮತ್ತೆ ಸುದ್ದಿಯಾಗುತ್ತಿದೆ. ಈ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದು ಇದೆಲ್ಲಾ ಗಾಳಿ ಸುದ್ದಿ ಎಂದಿದ್ದಾರೆ.
ಉದ್ಯಮಿಯೊಬ್ಬರ ಜೊತೆಗೆ ರಮ್ಯಾ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಅಂತೆಕಂತೆಗಳ ಬಗ್ಗೆ ಈಗ ಸ್ವತಃ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮದುವೆಗೆ ಬಗ್ಗೆ ಹಬ್ಬಿರುವ ಮಾಹಿತಿ ಸುಳ್ಳು ಎಂದು ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ಅವರ ವೈಯಕ್ತಿಕ ಜೀವನದ ಬಗ್ಗೆ, ಅದರಲ್ಲೂ ಮದುವೆ ಬಗ್ಗೆ ಗಾಳಿಸುದ್ದಿ ಹಬ್ಬಿದ್ದು ಇದೇ ಮೊದಲೇನೂ ಅಲ್ಲ. ಆಗಾಗ ಈ ಕುರಿತು ಗಾಸಿಪ್ ಹರಡುತ್ತಲೇ ಇರುತ್ತದೆ. ಈ ಬಾರಿ ವರ ಇವರೇ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬರ ಫೋಟೋವನ್ನು ಕೂಡ ಹಾಕಲಾಯಿತು. ಶೀಘ್ರದಲ್ಲೇ ಎಂಗೇಜ್ಮೆಂಟ್ ಎಂದು ಸುದ್ದಿ ಹರಿದಾಡಿತ್ತು. ಆದರೆ ಅದೆಲ್ಲ ಸುಳ್ಳು ಎಂದು ಸ್ವತಃ ರಮ್ಯಾ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿರುವ ನಟಿ, ‘ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಎಷ್ಟು ಬಾರಿ ಎಂಬುದರ ಲೆಕ್ಕವೇ ನನಗಿಲ್ಲ. ಒಂದು ವೇಳೆ ಮದುವೆಯಾದರೆ ನಾನೇ ಅದನ್ನು ನಿಮಗೆ ತಿಳಿಸುತ್ತೇವೆ. ಅನಧಿಕೃತ ಮೂಲಗಳಿಂದ ಬಂದ ವದಂತಿ ಹಬ್ಬಿಸುವುದನ್ನು ದಯವಿಟ್ಟು ನಿಲ್ಲಿಸಿ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಸದ್ಯ ರಮ್ಯಾ ನಟನೆಯಿಂದ ದೂರ ಉಳಿದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉತ್ತರಕಾಂಡ’ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಅವರು ನಟಿಸಿಬೇಕಿತ್ತು. ಕಾರಣಾಂತರಗಳಿಂದ ಅವರು ಆ ಪಾತ್ರಗಳನ್ನು ಅರ್ಧಕ್ಕೆ ಬಿಟ್ಟರು. ಹೀಗಾಗಿ ರಮ್ಯಾ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಸ್ವತಃ ರಮ್ಯಾ ಸ್ಪಷ್ಟನೆ ನೀಡಿದ್ದು ಇದೆಲ್ಲಾ ಗಾಳಿ ಸುದ್ದಿ ಎಂದಿದ್ದಾರೆ.