ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣಗೆ ಸಂತ್ರಸ್ತೆಯ ಸೀರೆ ದೊಡ್ಡ ಸಂಕಷ್ಟ ತರುವ ಸಾಧ್ಯತೆಯಿದೆ. ಸಂತ್ರಸ್ತೆಯ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಡಿಎನ್ಎ ಪರೀಕ್ಷೆ ಮಾಡಲಾಗಿದೆ.
ಸಂತ್ರಸ್ತೆಯ ಬಳಿ ನಾಲ್ಕು ಸೀರೆ ವಶಕ್ಕೆ ಪಡೆದಿದ್ದ ಎಸ್ಐಟಿ ಅದನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿತ್ತು. ಡಿಎನ್ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದೆ. ಪತ್ತೆಯಾಗಿರುವ ವೀರ್ಯ ಮತ್ತು ಕೂದಲು ಯಾರದ್ದು ಎಂದು ತಿಳಿಯುವ ಉದ್ದೇಶದಿಂದ ಪ್ರಜ್ವಲ್ ರೇವಣ್ಣಗೆ ಡಿಎನ್ಎ ಪರೀಕ್ಷೆ ಮಾಡಲಾಗಿದೆ. ಎಸ್ಐಟಿ ಪೊಲೀಸರು ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ಡಿಎನ್ಎ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಡಿಎನ್ಎ ಪರೀಕ್ಷೆಯಲ್ಲಿ ವೀರ್ಯ ಮತ್ತು ತಲೆಕೂದಲಿಗೆ ಸಾಮ್ಯತೆ ಕಂಡು ಬಂದರೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ ಬಿಗಿಯಾಗಲಿದೆ.
ತಮ್ಮ ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ನ್ಯಾಯಾಲಯಕ್ಕೆ ಎಸ್ಐಟಿ ಆರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಡಿಎನ್ಎ ಪರೀಕ್ಷೆ ವಿಚಾರವು ಬೆಳಕಿಗೆ ಬಂದಿದೆ. ಅಲ್ಲದೆ ವೈದ್ಯಕೀಯ ಪರೀಕ್ಷಾ ವರದಿ ಬಾಕಿ ಇದ್ದು, ಆ ವರದಿ ಬಂದ ನಂತರ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸುವುದಾಗಿ ಕೋರ್ಟ್ಗೆ ಎಸ್ಐಟಿ ಮಾಹಿತಿ ನೀಡಿದೆ.
ಚಾರ್ಜ್ಶೀಟ್ನಲ್ಲಿ ಏನಿದೆ? ಬನ್ನಿಕೋಡ ತೋಟದ ಮನೆಯಲ್ಲಿದ್ದಾಗ ಕುಡಿಯಲು ಒಂದು ಚೆಂಬು ನೀರು ತೆಗೆದುಕೊಂಡು ಬಾ ಪ್ರಜ್ವಲ್ ಹೇಳಿದ್ದರು. ನೀರು ತೆಗೆದುಕೊಂಡು ರೂಮ್ ಒಳಗೆ ಹೋಗ್ತಿದ್ದಂತೆ ಬಾಗಿಲನ್ನು ಲಾಕ್ ಮಾಡಿ ಪ್ರಜ್ವಲ್ ರೇವಣ್ಣ ದೌರ್ಜನ್ಯ ಎಸಗಿದ್ದರು. ಬಲವಂತವಾಗಿ ಸೀರೆ ಮತ್ತು ಬ್ಲೌಸ್ ತೆಗೆ ಎಂದು ಹೇಳಿ ಅತ್ಯಾಚಾರ ಎಸಗಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿದ್ದರು.
ಇದಾದ ಬಳಿಕ ಬೆಂಗಳೂರಿನ ಬಸವನಗುಡಿಯ ಮನೆ ಕ್ಲೀನ್ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದರು. ಒಗೆಯಲು ಬಟ್ಟೆ ತೆಗೆದುಕೊಂಡು ಹೋಗು ಎಂದು ಪ್ರಜ್ವಲ್ ರೂಂಗೆ ಕರೆದಿದ್ದರು. ರೂಂಗೆ ಹೋಗಲು ಹಿಂಜರಿದಾಗ ಪ್ರಜ್ವಲ್ ಗದರಿದ್ದರು.
ಒಳಗೆ ಹೋಗುತ್ತಿದ್ದಂತೆ ಚಿಲಕ ಹಾಕಿದ್ದ ಪ್ರಜ್ವಲ್ ಬಲವಂತವಾಗಿ ಅತ್ಯಾಚಾರ ಎಸಗಿದ್ದರು. ಹೊರಗಡೆ ವಿಚಾರ ಬಾಯಿಬಿಟ್ಟರೆ ವೀಡಿಯೊವನ್ನ ನಿನ್ನ ಮಗನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದರು. ಸಂಸದ ಎಂಬ ಭಯದಲ್ಲಿ ನಾನು ಅಂದು ಸುಮ್ಮನಾಗಿದ್ದೆ ಎಂದು ಸಂತ್ರಸ್ತೆ ಹೇಳಿರುವ ವಿಚಾರ ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.