ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಆರು ಸಂಸದರು ಸೇರಿದಂತೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಾವಿರಾರು ಬೆಂಬಲಿಗರು ಭಾನುವಾರ ರಾಜಧಾನಿ ಇಸ್ಲಾಮಾಬಾದ್ನಲ್ಲಿ ರ್ಯಾಲಿಗಾಗಿ ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಬಂಧಿತ ಸಂಸದರನ್ನು ಇಸ್ಲಾಮಾಬಾದ್ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಬಂಧಿತರನ್ನು ನ್ಯಾಯಾಧೀಶರು ಅವರಿಗೆ ಎಂಟು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ.
ಕಳೆದ ವಾರವಷ್ಟೇ ಪಾಕ್ ಸಂಸತ್ ನಲ್ಲಿ ಶಾಂತಿಯುತ ಸಭೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಯಿದೆ 2024 ಅನ್ನು ಅಂಗೀಕರಿಸಲಾಯಿತು. ಈ ಕಾಯ್ದೆಯಡಿ ಪಿಟಿಐ ಪಕ್ಷದ ಒಟ್ಟು 34 ಮಂದಿಯನ್ನು ಬಂಧಿಸಲಾಗಿದೆ.
ಈ ಸಣ್ಣ ಅಡೆತಡೆಗಳು ನಮ್ಮನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ನಾವು ಇಮ್ರಾನ್ ಖಾನ್ ಅವರ ಸೈನಿಕರು, ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಸಂಸದರ ಜೊತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಿಟಿಐ ನಾಯಕ ಮತ್ತು ಹಿರಿಯ ವಕೀಲ ಮುಹಮ್ಮದ್ ಶೋಯೆಬ್ ಶಾಹೀನ್ ಹೇಳಿದ್ದಾರೆ.
ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹೊಸ ಕಾನೂನನ್ನು ಸರ್ಕಾರ ಅಂಗೀಕರಿಸಿದ ನಂತರ ಇದು ಮೊದಲ ಪ್ರದರ್ಶನವಾಗಿದೆ. ಇದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟು ಶಾಂತಿಯುತ ಸಭೆಗೆ ಅವಕಾಶ ನೀಡುತ್ತದೆ ಎಂದು ಹೇಳಿದೆ. ರಾಜಕೀಯ, ಧಾರ್ಮಿಕ ಮತ್ತು ನಾಗರಿಕ ಹಕ್ಕುಗಳ ಗುಂಪುಗಳು ಪಾಕಿಸ್ತಾನದಲ್ಲಿ ಆಗಾಗ್ಗೆ ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದೆ.