ಹಮಾಸ್ ವಿರುದ್ಧ ಯುದ್ಧ ನಡೆಸುತ್ತಿರುವ ಇಸ್ರೇಲ್, ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಕಟ್ಟಡ ನಿರ್ಮಾಣ, ಬಡಗಿ, ಕಮ್ಮಾರ ಕೆಲಸದಾಳುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಕಾರ್ಮಿಕರನ್ನು ಒದಗಿಸಲು ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿದ್ದು10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭೇಡಿಕೆ ಇಟ್ಟಿದೆ.
ಒಟ್ಟು 10 ಸಾವಿರ ಕಟ್ಟಡ ನಿರ್ಮಾಣ ಕಾರ್ಮಿಕರ ಅಗತ್ಯವಿದ್ದು ಮತ್ತೆ ನೇಮಕ ಪ್ರಕ್ರಿಯೆ ನಡೆಸಿಕೊಡುವಂತೆ ಭಾರತಕ್ಕೆ ಇಸ್ರೇಲ್ ಮನವಿ ಮಾಡಿದೆ. ಅಲ್ಲದೇ ಮನೆ ಕೆಲಸಕ್ಕೆ 5 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಡುವಂತೆಯೂ ಬೇಡಿಕೆ ಸಲ್ಲಿಸಿದೆ.
ಇಸ್ರೇಲ್ ಮನವಿಗೆ ಸ್ಪಂದಿಸಿರುವ ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (ಎನ್ಎಸ್ಡಿಸಿ), ಈ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದು ವಿಷಯ ತಿಳಿಸಿದೆ.
ಕಟ್ಟಡ ನಿರ್ಮಾಣ ಕಾರ್ಮಿಕರ ನೇಮಕ ಪ್ರಕ್ರಿಯೆ ಈ ಬಾರಿ ಮಹಾರಾಷ್ಟ್ರದಲ್ಲಿ ನಡೆಯಲಿದೆ. ಮೊದಲ ಸುತ್ತಿನ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶ, ಹರಿಯಾಣ ಮತ್ತು ತೆಲಂಗಾಣದಲ್ಲಿ ನಡೆದಿತ್ತು. ಆಗ, 10,349 ಕಾರ್ಮಿಕರು ನೇಮಕಗೊಂಡಿದ್ದರು. ಇದೀಗ ಮತ್ತೆ ಬೇಡಿಕೆ ಸಲ್ಲಿಸಿದ್ದು ಮತ್ತಷ್ಟು ಕಾರ್ಮಿಕರು ಕೆಲಸಕ್ಕೆ ಇಸ್ರೇಲ್ ಗೆ ತೆರಳಲಿದ್ದಾರೆ.