ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಬಿಡುಗಡೆ ಮಾಡಬೇಕು. ಜೊತೆಗೆ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಆಡಳಿತಾರೂಢ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಅವರ ವಿರುದ್ಧ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ವಿಪಕ್ಷಗಳ ಧ್ವನಿ ಹತ್ತಿಕ್ಕಲಾಗುತ್ತಿದೆ. ಪ್ರಧಾನಿ ಷರೀಫ್ ಅವರು ರಾಜೀನಾಮೆ ನೀಡಬೇಕು ಎಂದು ಆರೋಪಿಸಿ ಪಿಟಿಐ ಕಾರ್ಯಕರ್ತರು ಕೆಲ ದಿನಗಳಿಂದ ಚಳವಳಿ ಆರಂಭಿಸಿದ್ದಾರೆ.
ಮೂರು ದಿನಗಳ ಹಿಂದೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು, ನಾಯಕರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧಿಸಲಾಗಿದೆ. ಇದರಿಂದ ಹೋರಾಟ ಮತ್ತಷ್ಟು ಕಾವು ಪಡೆದಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ನೇತೃತ್ವದ ಪಕ್ಷವು ಆರೋಪಿಸಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಾರ್ವಜನಿಕ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಇಸ್ಲಾಮಾಬಾದ್ನಲ್ಲಿ ತನ್ನ ನಾಯಕರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ, ಬಂಧನವನ್ನು ವಿರೋಧ ಪಕ್ಷವು ಬಲವಾಗಿ ಖಂಡಿಸಿತು. ಪಿಟಿಐ ಪಕ್ಷದ ಹಿರಿಯ ನಾಯಕ ಅಸದ್ ಕೈಸರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಪಕ್ಷದ ನಾಯಕರು ಕೋರ್ಟ್ನಲ್ಲಿ ಕಾನೂನು ಹೋರಾಟ ಮುಂದುವರೆಸುವುದರ ಜೊತೆಗೆ ಬೀದಿಗಿಳಿದು ಹೋರಾಡುತ್ತೇವೆ. ಬಂಧನಕ್ಕೊಳಗಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇತರ ನಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈಗಿನ ಸರ್ಕಾರ ಕಾನೂನುಬಾಹಿರವಾಗಿ ಅಧಿಕಾರ ಪಡೆದುಕೊಂಡಿದೆ. ಹೀಗಾಗಿ ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು. ಇಸ್ಲಾಮಾಬಾದ್ನಲ್ಲಿ ನಡೆದ ರ್ಯಾಲಿಗೆ ಅಡ್ಡಿಪಡಿಸಿದ್ದಕ್ಕಾಗಿ ಪೊಲೀಸ್ ಮುಖ್ಯಸ್ಥ ಮತ್ತು ಆಯುಕ್ತರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.