ಬಾಲಿವುಡ್ ಕ್ವೀನ್ ಬ್ಯೂಟಿ ನಟಿ ಕಂಗನಾ ರಣಾವತ್ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿದ್ದಾರೆ. ಕಂಗನಾ ತಾವು ದುಡಿದ ಹಣವೆಲ್ಲವನ್ನೂ ಎಮರ್ಜೆನ್ಸಿ ಚಿತ್ರದ ಮೇಲೆ ಹೂಡಿಕೆ ಮಾಡಿದ್ದಾರೆ. ಸದ್ಯ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನದ ಕುರಿತು ಸಿದ್ಧವಾದ ‘ತಲೈವಿ’ ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರದ ಹಂಚಿಕೆದಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 6 ಕೋಟಿ ರೂಪಾಯಿ ನೀಡುವಂತೆ ಕೇಳಿದ್ದಾರೆ.
ನಟಿ ಹಾಗೂ ರಾಜಕಾರಣಿಯಾಗಿ ಯಶಸ್ಸು ಕಂಡಿದ್ದ ಜಯಲಲೀತಾ ಅವರ ಜೀವನದಲ್ಲಿ ಸಾಕಷ್ಟು ಏಳಬೀಳುಗಳು ಇದ್ದವು. ಇದನ್ನೇ ತಲೈವಿ ಹೆಸರಿನಲ್ಲಿ ಸಿನಿಮಾ ಮಾಡಲಾಗಿದ್ದು ನಟಿ ಕಂಗನಾ ರಾಣವತ್ ನಟಿಸಿದ್ದರು.
2021ರ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ಚಿತ್ರ ಹಿಂದೇಟು ಹಾಕಿತ್ತು. ಸಿನಿಮಾ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ‘ತಲೈವಿ’ ಹಂಚಿಕೆದಾರರು 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿ ಆಗಿದೆ.
ಡಿಸ್ಟ್ರಿಬ್ಯೂಷನ್ ಕಂಪನಿ ‘ತಲೈವಿ’ ನಿರ್ಮಾಪಕರಿಗೆ 6 ಕೋಟಿ ರೂಪಾಯಿ ಪೇಮೆಂಟ್ ಮಾಡಿ ಹಂಚಿಕೆ ಹಕ್ಕು ಪಡೆದಿತ್ತು. ಆದರೆ ಈ ಚಿತ್ರದಿಂದ ಹಂಚಿಕೆದಾರರಿಗೆ ನಷ್ಟ ಆಗಿದೆ. ಹಣ ಹಿಂದಿರುಗಿಸುವಂತೆ ನಿರ್ಮಾಣ ಸಂಸ್ಥೆಗೆ ಡಿಸ್ಟ್ರಿಬ್ಯೂಷನ್ ಕಂಪನಿ ಇ-ಮೇಲ್ ಕಳುಹಿಸಿದೆ ಎನ್ನಲಾಗಿದೆ. ಆದರೆ, ಅವರಿಗೆ ನಿರ್ಮಾಣ ಸಂಸ್ಥೆಯಿಂದ ಅವರಿಗೆ ಯಾವುದೇ ಉತ್ತರ ಬಂದಿಲ್ಲ. ಸದ್ಯ ಈ ವಿಚಾರದಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಹಂಚಿಕೆದಾರರು ‘ತಲೈವಿ’ ನಿರ್ಮಾಪಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.