ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಗೆ ‘ಆಯ್ಕೆ’ಗಳನ್ನು ಬದಲಿಸಿಕೊಳ್ಳಲು, ತೆಗೆದುಹಾಕಲು ಹಾಗೂ ಕ್ರಮಾಂಕ ಬದಲಿಸಿಕೊಳ್ಳಲು ಇದುವರೆಗೂ ನೀಡಿದ್ದ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಕೊನೆಗೊಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಮಾತನಾಡಿ, ಈ ಸಲುವಾಗಿ ತೆರೆದಿದ್ದ ಕೆಇಎ (KEA) ಪೋರ್ಟಲ್ ಅನ್ನು ಸ್ಥಗಿತಗೊಳಿಸಿದ್ದು, ಯಾವ ಬದಲಾವಣೆಗೂ ಅವಕಾಶ ಇರುವುದಿಲ್ಲ. ಈ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಗೆ ಪೂರ್ವ ತಯಾರಿ ಆರಂಭಿಸಿದಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.