ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿವೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾಗಿದೆ. ಕೆಲ ಆರೋಪಿಗಳು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಲು ತಯಾರಾಗಿದ್ದಾರೆ. ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಮಾಧ್ಯಮಗಳ ಕ್ಯಾಮರಾಗಳಿಗೆ ಮಧ್ಯದ ಬೆರಳು ತೋರಿಸಿ ಅಸಹ್ಯಕರ ಸಂಜ್ಞೆ ಮಾಡಿದ್ದರು ಎಂಬ ದೃಶ್ಯ ವೈರಲ್ ಬೆನ್ನೆಲ್ಲೆ ನಟದ ಫ್ಯಾನ್ಗಳ ಅಧಿಕೃತ ಪುಟ ಡಿ ಕಂಪನಿ ಸ್ಪಷ್ಟನೆ ನೀಡಿದೆ. ಡಿ ಬಾಸ್ ಮಾಡಿದ್ದ ವಿಘ್ನ ಹರ ಮುದ್ರೆ ಹೊರತು ಅಸಹ್ಯಕರ ಸಂಜ್ಞೆಯಲ್ಲ ಎಂದು ಹೇಳಿದ್ದಾರೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಕುಟುಂಬಸ್ಥರನ್ನು ಭೇಟಿ ಮಾಡಲು ಸೆಲ್ನಿಂದ ಹೊರ ಬರುವ ವೇಳೆ ಕ್ಯಾಮರಾಗಳಿಗೆ ಕೈನ ಮಧ್ಯದ ಬೆರಳನ್ನು ಮುಂದೆ ಮಾಡಿ ಉಳಿದ ಬೆರಳುಗಳನ್ನು ಮಡಿಚಿಟ್ಟುಕೊಂಡಿದ್ದರು. ಇದು ಅಸಹ್ಯಕರ ಸಂಜ್ಞೆ ಎಂದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದ ಉಂಟು ಮಾಡಿತ್ತು. ದರ್ಶನ್ ನಡುವಳಿಕೆ ಸುಧಾರಿಸಿಲ್ಲ ಮಾಧ್ಯಮಗಳು ತನ್ನ ವಿರುದ್ಧ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಈ ರೀತಿ ಅಸಹನೆ ತೋರಿದ್ದಾರೆ ಎನ್ನಲಾಗಿತ್ತು. ಸದ್ಯ ಅಭಿಮಾನಿಗಳ ಸಂಘ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಡಿ ಕಂಪನಿ ಅಧಿಕೃತ ಪುಟ, ” ಮಾಧ್ಯಮಗಳು ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ವಿರುದ್ಧ ಸುಖಾಸುಮ್ಮನೆ ಇಲ್ಲಸಲ್ಲದ ವಿಚಾರಗಳನ್ನು ಪ್ರಚೋದಿಸಿ ಮನಬಂದಂತೆ ಸುದ್ದಿ ಬಿತ್ತರಿಸುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ಡಿ ಬಾಸ್ರವರು ನಡೆದು ಕೊಂಡು ಬರುವಾಗ ವಿಘ್ನ ಹರ ಮುದ್ರಾ ಮಾಡಿಕೊಂಡು ನಡೆದುಕೊಂಡು ಬಂದಿದ್ದನ್ನು ಏನೋ ಅಸಭ್ಯವಾಗಿ ತೋರಿಸಿದರು ಎಂದು ಬಿತ್ತರಿಸುತ್ತಿರುವ ನಿಮಗೆ ನಮ್ಮ ಧಿಕ್ಕಾರ ” ಎಂದಿದ್ದಾರೆ.
ಮುಂದುವರೆದು, ” ಕೆಲ ಮಾಧ್ಯಮಗಳು ಸತ್ಯ ಹೇಳೊದು ನಾವೇ ಉತ್ತಮ ಸಮಾಜ ಕಟ್ಟೊದು ನಾವೇ ನಮ್ಮಿಂದಲೇ ಎಲ್ಲಾ ಅಂತಾ ಬೊಗಳೆ ಬಿಡುವ ಅವರಿಗೆ ಸತ್ಯಾಂಶ ತೋರಿಸದೆ ಮತ್ತೊಬ್ಬರ ಮೇಲೆ ಗೊಬೆ ಕೂರಿಸಿ ಇಲ್ಲ ಸಲ್ಲದ ಸುಳ್ಳುಗಳನ್ನು ತೋರಿಸಿ ಜನರ ದಿಕ್ಕು ತಪ್ಪಿಸಿದಾಗ ಮಾತ್ರ ಹೈಫೈ ಆಫೀಸ್ ಹೈಫೈ ಲೈಫ್ ” ಎಂದು ಬೇಸರ ಹೊರಹಾಕಿದೆ.