ಹಾಸನ: ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ CRPF ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ. ರವಿಶಂಕರ್.ಎಂ.ಆರ್. (39) ಮೃತ ಯೋಧನಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಯೋಧ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ಯೋಧ ರವಿಶಂಕರ್ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿಯಿತ್ತು. ಅರಸೀಕೆರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧನ ವರದಿ ಸಂಗ್ರಹ ಒಂದು ವಾರದ ಹಿಂದೆ ಹೊಳೆನರಸೀಪುರಕ್ಕೆ ರವಿಶಂಕರ್ ಬಂದಿದ್ದರು.
ಇಂದು ಕರ್ತವ್ಯಕ್ಕೆ ತೆರಳಬೇಕಿದ್ದ ರವಿಶಂಕರ್ ಅವರಿಗೆ ಶುಕ್ರವಾರ ಜ್ವರ, ಸುಸ್ತು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಗೆ ತೆರಳಿದ್ದು ವೈದ್ಯರು ಸರಿಯಾಗಿ ತಪಾಸಣೆ ಮಾಡದೇ ಕೇವಲ ಮಾತ್ರೆ ನೀಡಿ ಕಳುಹಿಸಿದ್ದರು.
ಮನೆಗೆ ತೆರಳುತ್ತಿದ್ದಂತೆ ಯೋಧ ರವಿಶಂಕರ್.ಎಂ.ಆರ್. ಸಾವನ್ನಪ್ಪಿದ್ದಾರೆ. ಸರಿಯಾದ ಚಿಕಿತ್ಸೆ ನೀಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದು, ರವಿಶಂಕರ್ ಸಾವಿಗೆ ವೈದ್ಯನೇ ನೇರ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಆಸ್ಪತ್ರೆ ಬಳಿ ರವಿಶಂಕರ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.