ಇಂದು ಸೆಪ್ಟೆಂಬರ್ 15 ಇಂಜಿನಿಯರ್ ದಿನ. ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ದೇಶ ಕಂಡ ಅಪ್ರತಿಮ ಇಂಜಿನಿಯರ್, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಸ್ಮರಣಾರ್ಥ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ.
ಇಂಜಿನಿಯರ್ ದಿನವನ್ನು ಮೊದಲ ಬಾರಿಗೆ 1968, ಸೆಪ್ಟೆಂಬರ್ 15 ರಂದು ಆಚರಣೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 15 ರಂದು ಭಾರತದಲ್ಲಿ ಇಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಇಂಜಿನಿಯರ್ ದಿನವನ್ನು ಆಚರಣೆ ಮಾಡುವ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು ಮತ್ತು ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳಲಾಗುತ್ತದೆ.
ಸರ್. ಎಂ. ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15,1861 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆ ಯಾವಾಗಲು ಶಾಶ್ವತವಾಗಿರುತ್ತದೆ. ಪುಣೆಯ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಾದ ನೀರಾವರಿ ಹಾಗೂ ಪ್ರವಾಹ ತಡೆ ಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಪುಣೆಯ ಖಡಕ್ ವಾಸ್ಲ ಜಲಾಶಯದಲ್ಲಿ 1903 ರಲ್ಲಿ ನಿರ್ಮಿಸಿದ ಅಟೋಮ್ಯಾಟಿಕ್ ಬ್ಯಾರಿಯರ್ ವಾಟರ್ ಫ್ಲಡ್ಗೇಟ್ಗಳ ನಿರ್ಮಾಣದ ಹಿಂದೆ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾಗಿದೆ. ಇದರ ನಂತರ ವಿಶ್ವೇಶ್ವರಯ್ಯ ಅವರು 1917 ರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪನೆಗೂ ಅವರೇ ಮುಖ್ಯ ಕಾರಣರಾಗಿದ್ದು, ಅದು ಮುಂದೆ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂದು ಹೆಸರು ಪಡೆಯಿತು.
ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್. ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನಲ್ಲಿ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು, ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು.
1934 ರಲ್ಲಿ ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ ಸಮಿತಿಯಲ್ಲೂ ಅವರ ಪಾತ್ರವಿತ್ತು. ವಿಶ್ವೇಶ್ವರಯ್ಯ ಅವರು ಜಲಾಶಯ ನಿರ್ಮಾಣ, ತೂಗು ಸೇತುವೆ ನಿರ್ಮಾಣದಿಂದ ಹಿಡಿದು ಸಮಾಜಕ್ಕೆ ನೆರವಾಗುವಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ.
ಹೈದರಾಬಾದ್ ಸಂಸ್ಥಾನದಲ್ಲೂಸರ್ ಎಂ.ವಿ. ಸೇವೆ
ಹೈದರಾಬಾದ್ನಲ್ಲಿ 1908 ರಲ್ಲಿ ಸಂಭವಿಸಿದ ದುರಂತದ ಪ್ರವಾಹದ ನಂತರ, ಆಗಿನ ನಿಜಾಮರು ಒಳಚರಂಡಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಮತ್ತು ನಗರವನ್ನು ಪ್ರವಾಹದಿಂದ ರಕ್ಷಿಸಲು ಸರ್ ಎಂ ವಿಶ್ವೇಶ್ವರಯ್ಯ ಅವರ ಸೇವೆಗಳನ್ನು ವಿನಂತಿಸಿದರು. ಇಂಜಿನಿಯರ್ ಅವರು ಶೇಖರಣಾ ಜಲಾಶಯಗಳ ನಿರ್ಮಾಣವನ್ನು ಪ್ರಸ್ತಾಪಿಸಿದರು ಮತ್ತು ಹೈದರಾಬಾದ್ ಮೂಲಕ ಹರಿಯುವ ಮುಸಿ ನದಿಯ ಮಾಲಿನ್ಯವನ್ನು ತಡೆಗಟ್ಟಲು ನಗರದ ಹೊರಗೆ ಒಳಚರಂಡಿ ಫಾರ್ಮ್ ಅನ್ನು ನಿರ್ಮಿಸಲು ನೆರವಾಗಿದ್ದರು.