ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಭಾನುವಾರದಿಂದ ಸಲ್ಲು ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಸಲ್ಮಾನ್ ಗೆ ಸೂಚನೆ ನೀಡದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.
ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾರೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಹೇಳಿದ್ದು, ಲಾರೆನ್ಸ್ ಹೇಳಿಕೆ ಬಾಲಿವುಡ್ ನಲ್ಲಿ ಆತಂಕ ಸೃಷ್ಟಿಸಿದೆ.