ನ್ಯೂಯಾರ್ಕ್ನ ಮೆಲ್ವಿಲ್ಲೆಯಲ್ಲಿರುವ ಬಾಪ್ಸ್ಸ್ವಾಮಿ ನಾರಾಯಣ ದೇಗುಲದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತೀಯ ಕಾನ್ಸುಲೇಟ್ ಜನರಲ್, ಇಂಥ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಯಾರ್ಕ್ನ ಮೆಲ್ವಿಲ್ಲೆಯಲ್ಲಿರುವ ಬಾಪ್ಸ್ ಸ್ವಾಮಿ ನಾರಾಯಣ ದೇಗುಲದ ಮೇಲಿನ ದಾಳಿ ಒಪ್ಪುವಂಥದ್ದಲ್ಲ. ಕಾನ್ಸುಲೇಟ್ ಕಚೇರಿ ಹಿಂದೂ ಸಮುದಾಯದ ಜೊತೆ ಸಂಪರ್ಕದಲ್ಲಿದೆ. ಈ ವಿಷಯವನ್ನು ಯುಎಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಂಥ ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಅಮೆರಿಕನ್ ಹಿಂದೂ ಫೌಂಡೇಷನ್ ದೇಗುಲದ ಮೇಲಿನ ದಾಳಿ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಯುಎಸ್ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಈ ವಾರಾಂತ್ಯದಲ್ಲಿ ಮೆಲ್ವಿಲ್ಲೆ ಸಮೀಪದ ನಾಸ್ಸೌ ಕೌಂಟಿಯಲ್ಲಿ ಹಿಂದೂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮ ಇರುವುದರಿಂದ ಹಿಂದೂ ಸಂಸ್ಥೆಗಳ ಮೇಲೆ ದಾಳಿ ಬೆದರಿಕೆ ಆತಂಕ ವ್ಯಕ್ತವಾಗಿತ್ತು’ ಎಂದು ತಿಳಿಸಿದೆ. ಇದರ ಜೊತೆಗೆ, ‘ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ವಿಡಿಯೋ ಮೂಲಕ ಹಿಂದೂಗಳು ಮತ್ತು ಹಿಂದೂ ಸಂಸ್ಥೆಗಳ ಮೇಲೆ ಬೆದರಿಕ ಹಾಕಿದ್ದ’ ಎಂದು ತಿಳಿಸಿದೆ. ‘ನ್ಯೂಯಾರ್ಕ್ನಲ್ಲಿರುವ ದೇಗುಲದ ಮೇಲೆ ನಡೆದ ದಾಳಿಯು ಈ ಹಿಂದೆ ಕ್ಯಾಲಿಫೋರ್ನಿಯಾ ಮತ್ತು ಕೆನಡಾದಲ್ಲಿ ನಡೆದ ದಾಳಿಗಳೊಂದಿಗೆ ಸಾಮ್ಯತೆ ಹೊಂದಿದೆ’ ಎಂದು ತಿಳಿಸಿದೆ.