ಲಂಡನ್: ‘ಬ್ರಿಟನ್ ಸರ್ಕಾರವು ಭಾರತೀಯ ಹೈಕಮಿಷನ್ ಕಚೇರಿಗೆ ಅಗತ್ಯ ಭದ್ರತೆ ಒದಗಿಸಿದೆ ಎಂದು ಬ್ರಿಟನ್ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹೈಕಮಿಷನ್ ಕಚೇರಿ ಎದುರು ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೈಕಮಿಷನ್ ಎದುರು ಬ್ಯಾರಿಕೇಡ್ಗಳನ್ನು ಹಾಕಿರುವುದು ಹಾಗೂ ಪೊಲೀಸ್ ಸಿಬ್ಬಂದಿ ಇರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಖಾಲಿಸ್ತಾನ ಪರವಾಗಿ ಹೋರಾಟ ನಡೆಸುತ್ತಿರುವ ಪ್ರತ್ಯೇಕತಾವಾದಿಗಳು ಮತ್ತೆ ಭಾರತೀಯ ಹೈಕಮಿಷನ್ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಈ ಅಗತ್ಯ ಕ್ರಮಕೈಗೊಂಡಿದೆ.
‘ಖಾಲಿಸ್ತಾನ ಪರವಾಗಿ ಭಾನುವಾರ ಹೋರಾಟ ನಡೆಸಿದ್ದ ಪ್ರತ್ಯೇಕತಾವಾದಿಗಳು ಭಾರತೀಯ ಹೈಕಮಿಷನ್ ಎದುರು ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದರು. ಬ್ರಿಟನ್ ಸರ್ಕಾರ ಭದ್ರತೆ ನೀಡಿಲ್ಲ ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೂ ಬ್ರಿಟನ್ನಲ್ಲಿರುವ ಭಾರತೀಯರು ಖಂಡನೆ ವ್ಯಕ್ತಪಡಿಸಿದ್ದರು.
ಅದೇ ಜಾಗದಲ್ಲಿ ಮತ್ತೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಲಾಗಿದೆ. ಜೊತೆಗೆ ಹೈಕಮಿಷನ್ ಕಟ್ಟಡದ ಎದುರು ಬೃಹದಾಕಾರದ ಮತ್ತೊಂದು ತ್ರಿವರ್ಣ ಧ್ವಜವನ್ನು ಕಟ್ಟಲಾಗಿದೆ ಎಂದು ಬ್ರಿಟನ್ ಅಧಿಕಾರಿಗಳು ಹೇಳಿದ್ದರು. ‘ಪ್ರತ್ಯೇಕತಾವಾದಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಇದೀಗ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ.