ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ಕಂಗನಾ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ‘ಎಮರ್ಜೆನ್ಸಿ’ ಸಿನಿಮಾವನ್ನು ಬಿಡುಗಡೆಗೆ ರೆಡಿಯಾಗಿದೆ. ಆದರೆ ಅಂದುಕೊಂಡ ಸಮಯಕ್ಕೆ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಚಿತ್ರ ಒಂದಿಲ್ಲೊಂದು ಕಾರಣಗಳಿಂದ ವಿವಾದಗಳ ಸುಳಿಗೆ ಸಿಲುಕುತ್ತಲೇ ಇದೆ. ಈ ನಡುವೆ ಹೊಸದೊಂದಿ ಸಮಸ್ಯೆ ಶುರುವಾಗಿದೆ.
ವಿವಾದಾತ್ಮಕ ಚಿತ್ರ ʻಎಮರ್ಜೆನ್ಸಿʼಗೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯನೋಟಿಸ್ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು, ಈ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ಚಿತ್ರಣವನ್ನು ತಪ್ಪಾಗಿ ಪ್ರದರ್ಶಿಸಲಾಗಿದೆ. ಜೊತೆಗೆ ಸಿಖ್ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಕಂಗನಾ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಕಂಗನಾ ಅವರಿಗೆ ನೋಟಿಸ್ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿದೆ.
ʻಎಮರ್ಜೆನ್ಸಿʼ ಸಿನಿಮಾ ಆರಂಭದಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಶಿರೋಮಣಿ ಅಕಾಲಿ ದಳ ಸೇರಿದಂತೆ ಅನೇಕ ಸಿಖ್ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಆರಂಭದಿಂದಲೂ ಸಿಖ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ, ಸಿಖ್ಖರ ಸಮುದಾಯಗಳ ಬಗೆಗಿನ ನೈಜತೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.