ಬೆಳಗಾವಿ: ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಮೇಲೆ ದಾಳಿ ಮಾಡಿ ಚಾಕು ಇರಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಗಾಯಾಳುಗಳನ್ನು ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ್, ದರ್ಶನ್ ಪಾಟೀಲ್ ಮತ್ತು ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ. ಪ್ರವೀಣ್ ಗುಂಡ್ಯಾಗೋಳ್ ಎಂಬವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಇಬ್ಬರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಈ ಘಟನೆ ನಡೆದಿದ್ದು, ಡ್ಯಾನ್ಸ್ ಮಾಡುವಾಗ ಕಾಲು ತಾಕಿದ್ದಕ್ಕೆ ಹುಡುಗರು ಕಿರಿಕ್ ಮಾಡಿಕೊಂಡಿದ್ದರು. ಬಳಿಕ ಮೆರವಣಿಗೆಯಿಂದ ಹೊರಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಯುವಕರ ಗ್ಯಾಂಗ್ವೊಂದು ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು, ಸ್ಥಳದಿಂದ ಪಾರಾಗಿದ್ದಾರೆ
ಬೈಕ್ನಲ್ಲಿ ಪಾರಾಗುತ್ತಿದ್ದ ಯುವಕರನ್ನು ಸಿಪಿಐ ವಿಶ್ವನಾಥ್ ಕಬ್ಬೂರ ಮತ್ತು ಇತರ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಪೊಲೀಸರ ತನಿಖೆಯ ಬಳಿಕ ಚರ್ಚ್ ಗಲ್ಲಿಯ ಯುವಕರ ಗ್ಯಾಂಗ್ ಈ ಕೃತ್ಯ ಎಸಗಿದ್ದು, ವೈಯಕ್ತಿಕ ಕಾರಣದಿಂದ ಚಾಕು ಇರಿದಿದ್ದಾರೆ. ಗಾಂಜಾ ಮತ್ತಿನಲ್ಲಿ ಚಾಕು ಇರಿದಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ ಎಂದಿದ್ದಾರೆ.