ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ದರ್ಶನ್ ಸಂಪೂರ್ಣ ಸೊರಗಿ ಹೋಗಿದ್ದಾರೆ. ಈ ಮಧ್ಯೆ ದರ್ಶನ್ ಪದೇ ಪದೇ ಜೈಲು ಅಧಿಕಾರಿಗಳ ಬಳಿ ಹೊಸ ಹೊಸ ಬೇಡಿಕೆಗಳನ್ನು ಇಡುತ್ತಿದ್ದಾರೆ.
ತಮ್ಮ ಬ್ಯಾರಕ್ನಲ್ಲಿ ಟಿವಿ ಅಳವಡಿಸುವಂತೆ ದರ್ಶನ್ ಪದೇ ಪದೇ ಜೈಲಧಿಕಾರಿಗಳ ಬಳಿ ಕೇಳಿ ಕೊಂಡಿದ್ದರು. ಟಿವಿ ಅಳವಡಿಸಲಾಗಿತ್ತಾದರೂ ಆ ಟಿವಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಲವು ದಿನಗಳಿಂದ ಈ ಬಗ್ಗೆ ಬೇಡಿಕೆ ಇಡುತ್ತಲೇ ಬಂದಿದ್ದ ದರ್ಶನ್ಗೆ ಕೊನೆಗೂ ಜೈಲಧಿಕಾರಿಗಳು ಟಿವಿ ನೀಡಿದ್ದಾರೆ. ಇರುವುದರಲ್ಲೇ ಚೆನ್ನಾಗಿ ಕೆಲಸ ಮಾಡುವ ಟಿವಿಯೊಂದನ್ನು ದರ್ಶನ್ ಇರುವ ಕೋಣೆಯಲ್ಲಿ ಅಳವಡಿಸಿದ್ದಾರೆ. ದರ್ಶನ್ ಕೋಣೆಯಲ್ಲಿ ಟಿವಿ ಏನೋ ಅಳವಡಿಸಲಾಗಿದೆ. ಆದರೆ ದರ್ಶನ್ ಕೇವಲ ಸರ್ಕಾರಿ ಚಾನೆಲ್ಗಳನ್ನು ಮಾತ್ರವೇ ವೀಕ್ಷಿಸಬೇಕಿದೆ. ಯಾವುದೇ ಖಾಸಗಿ ಚಾನೆಲ್ಗಳು ಪ್ರಸಾರವಾಗದಂತೆ ಮಾಡಿಫಿಕೇಷನ್ ಮಾಡಲಾಗಿದೆ.
ಟಿವಿ ಬಳಿಕ ದರ್ಶನ್ ಜೈಲಧಿಕಾರಿಗಳ ಬಳಿ ತಮಗೆ ಕುರ್ಚಿ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ತಮ್ಮ ಕೋಣೆಯಲ್ಲಿ ಕೂರಲು ಕುರ್ಚಿ ಇಲ್ಲವೆಂದು ಬೆನ್ನು ನೋವಿನ ಸಮಸ್ಯೆ ಇರುವ ಕಾರಣ ಕೂರಲು ಕುರ್ಚಿ ಬೇಕಾಗಿದೆ ಎಂದು ದರ್ಶನ್ ಬೇಡಿಕೆ ಇಟ್ಟಿದ್ದಾರೆ. ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾದಾಗಲೂ ಸಹ ನಟ ದರ್ಶನ್ ತಮಗೆ ಕುರ್ಚಿಯ ಅವಶ್ಯಕತೆ ಇದೆಯೆಂದು ಕೇಳಿದ್ದಾರೆ. ಜೈಲಧಿಕಾರಿಗಳು ಕುರ್ಚಿ ಕೊಡುತ್ತಿಲ್ಲವೆಂದು ಸಹ ದರ್ಶನ್ ನ್ಯಾಯಾಧೀಶರ ಬಳಿ ಹೇಳಿದ್ದಾರೆ. ಆದರೆ ದರ್ಶನ್ಗೆ ಚೇರು ಕೊಡಬೇಕೇ ಬೇಡವೆ ಎಂದು ಜೈಲು ಅಧಿಕಾರಿಗಳೇ ನಿರ್ಣಯ ಮಾಡಬೇಕಿದೆ.