ಡಿಜಿಟಲ್ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳು ಥಿಯೇಟರ್ ಗೆ ಬರ್ತಿದ್ದಂತೆ ಮೊಬೈಲ್ ಗೆ ಎಂಟ್ರಿಕೊಟ್ಟು ಬಿಡ್ತಾವೆ. ಅಲ್ಲದೆ ಶೂಟಿಂಗ್ ಸಂದರ್ಭದಲ್ಲಿನ ದೃಶ್ಯಗಳು ಲೀಕ್ ಆಗಿ ಚಿತ್ರತಂಡಕ್ಕೆ ಸಾಕಷ್ಟು ಸಮಸ್ಯೆಯಾಗುತ್ತದೆ. ಇದೀಗ ರಜನಿಕಾಂತ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ ನಟಿಸುತ್ತಿರುವ ‘ಕೂಲಿ’ ಸಿನಿಮಾದ ದೃಶ್ಯ ಲೀಕ್ ಆಗಿದೆ. ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಸಮಧಾನ ಹೊರಹಾಕಿದ್ದಾರೆ. ಅಲ್ಲದೆ, ಅವರು ಕೈಮುಗಿದು ಒಂದು ಕೋರಿಕೆಯನ್ನು ಮಾಡಿಕೊಂಡಿದ್ದಾರೆ.
ರಜನಿಕಾಂತ್ ಅವರು ಸದ್ಯ ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ರಜನಿಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರು ನಟಿಸುತ್ತಿರುವದರಿಂದ ಸಹಜವಾಗಿಯೇ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಆದ್ರೆ ಈ ಮಧ್ಯೆ ಕಿಡಿಗೇಡಿಗಳು ಕೂಲಿ ಸಿನಿಮಾದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಲೀಕ್ ಮಾಡಿದ್ದಾರೆ.
ಲೀಕ್ ಆಗಿರುವ ದೃಶ್ಯದಲ್ಲಿ ನಾಗಾರ್ಜುನ ಅವರು ಶೂಟ್ನಲ್ಲಿ ಭಾಗಿಯಾಗಿದ್ದಾರೆ. ನಾಗಾರ್ಜುನ ಅವರು ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಇದನ್ನು ಶೂಟ್ ಮಾಡಿದ್ದು ಯಾರು, ಲೀಕ್ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಘಟನೆ ಲೋಕೇಶ್ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಈ ರೆಕಾರ್ಡಿಂಗ್ನಿಂದಾಗಿ ಹಲವು ಜನರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿಯ ಕೆಲಸ ಮಾಡಬೇಡಿ. ಇದು ಒಳ್ಳೆಯ ಅನುಭವವನ್ನು ನಾಶ ಮಾಡುತ್ತದೆ’ ಎಂದಿದ್ದಾರೆ.