ಬೆಂಗಳೂರು:- ಕರಾವಳಿ, ಮಲೆನಾಡು ಸೇರಿ ಉತ್ತರ ಒಳನಾಡಿನಲ್ಲಿ ಇಂದು ಹಗುರ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯವಾಗಿದ್ದರೆ, ಒಳನಾಡಿನಲ್ಲಿ ದುರ್ಬಲಗೊಂಡ ಹಿನ್ನೆಲೆ, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ.
ಉಳಿದಂತೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಮುಖ್ಯವಾಗಿ ಶುಷ್ಕ ಹವಾಮಾನ ಇರಲಿದೆ.
ಇನ್ನು ಬೆಂಗಳೂರು ನಗರ ಸುತ್ತಮುತ್ತ ಮುಂದಿನ 24 ಗಂಟೆಯಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಒಣ ಹವಾಮಾನ ಮುಂದುವರಿಯಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 20 ಡಿ.ಸೆ ಇರಲಿದೆ.