ರಾಯಚೂರು: ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಮಾಡಿ ಕಾಂಗ್ರೆಸ್ನವರು ಕೇವಲ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಖಜಾನೆ ಖಾಲಿಯಾಗಿದೆ ಎಲ್ಲಿಂದ ತಂದು ಅನುದಾನ ಕೊಡುತ್ತಾರೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತಿದ್ದಾರೆ. ಅದು ಕೊಡುವುದಿದ್ದರು ಪರವಾಗಿಲ್ಲ, ಕಲಬುರಗಿಯಲ್ಲಿನ 5 ಸಾವಿರ ಗುಂಡಿಗಳನ್ನಾದರೂ ಮುಚ್ಚಲಿ. ಈ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ, ಅವರನ್ನ ಗೇಲಿ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು. ನಾಗಮಂಗಲ ಗಲಭೆ ಪ್ರಕರಣ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಂಗ್ರೆಸ್. ಅದನ್ನು ಆರಿಸುವ ಕೆಲಸ ನಮಗಿದೆ.
ನಾಗಮಂಗಲಕ್ಕೆ ನಾನು ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ಬಂದಿದ್ದೇನೆ. ಹಿಂದೂಗಳನ್ನ ಟಾರ್ಗೆಟ್ ಮಾಡಿ ಅವರ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದವರು ಭಾಗಿಯಾಗಿದ್ದಾರೆ. ನಾಗಮಂಗಲದಲ್ಲಿ ಅವರಿಗೆ ಏನ್ ಕೆಲಸ ಎಂದು ಪ್ರಶ್ನಿಸಿದರು. ಎಸ್ಡಿಪಿಐ, ಪಿಎಫ್ಐ ನಿಷೇಧಿತ ಸಂಘಟನೆಯವರು ಅಲ್ಲಿದ್ದಾರೆ. ವ್ಯವಸ್ಥಿತವಾಗಿ ಅವರು ಇದನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಆರೋಪಿಸಿದರು.