ಬೆಂಗಳೂರು: ಯುಗಾದಿ ಹಬ್ಬದ ಮರುದಿನವಾದ ಇಂದು ಹೊಸತೊಡಕು ನಡೆಯುತ್ತಿದ್ದು, ಕಳೆದ ವರ್ಷ ಆರಂಭವಾದ ʼಜಟ್ಕಾ ಕಟ್ʼ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ.
”ಹಿಂದೂ ಹಬ್ಬಕ್ಕೆ ಹಿಂದೂಗಳು ಸಿದ್ಧಪಡಿಸಿದ ಮಾಂಸವನ್ನೇ ಖರೀದಿಸುವಂತೆʼ’ ಪ್ರೇರೇಪಿಸುವ ʼಹಲಾಲ್ ಬಾಯ್ಕಾಟ್ʼ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಹಿಂದೂಪರ ಸಂಘಟನೆಗಳು ಹಲಾಲ್ ಕಟ್ ತಿರಸ್ಕರಿಸಿ ಎಂದು ಪ್ರಚಾರ ಮಾಡಿದ್ದವು. ಕೆಲ ಹಿಂದೂಪರ ಕಾರ್ಯಕರ್ತರು ಹಲಾಲ್ಗೆ ಸಡ್ಡು ಹೊಡೆಯಲು ಹಿಂದವೀ ಮೀಟ್ ಮಾರ್ಟ್ನಲ್ಲಿ ಮಾಂಸ ಖರೀದಿ ಮಾಡುವಂತೆ ಅಭಿಯಾನ ಶುರು ಮಾಡಿದ್ದರು.
ರಾಜ್ಯದಲ್ಲಿ ಮೊದಲಿಗೆ ಹಿಂದವೀ ಮೀಟ್ ಮಾರ್ಟ್ ಅನ್ನು ಮುನೇಗೌಡ ಎಂಬ ವ್ಯಕ್ತಿ ಆರಂಭಿಸಿದ್ದರು. ಹಲಾಲ್ ಕಟ್ ಮಾಂಸದ ವಿರುದ್ಧ ಮುನೇಗೌಡ ಅಭಿಯಾನ ಆರಂಭಿಸಿದ್ದರು. ಹಿಂದವಿ ಬ್ರಾಂಡ್ನ ಅಡಿಯಲ್ಲಿ, ಬೆಂಗಳೂರು ಮತ್ತು ಹೊರವಲಯದಲ್ಲಿ ನಾಲ್ಕು ಅಂಗಡಿಗಳನ್ನು ತೆರೆಯಲಾಗಿತ್ತು. ಈ ವರ್ಷ ನಗರದಾದ್ಯಂತ 18 ಅಂಗಡಿಗಳನ್ನು ತೆರೆಯಲಾಗಿದೆ.
ಕಮ್ಮನಹಳ್ಳಿ, ಇಟ್ಟಮಡು, ದಾಸರಹಳ್ಳಿ, ಸಂಜಯ್ ನಗರ, ಗೆದ್ದಲಹಳ್ಳಿ, ಯಲಹಂಕ, ಇಂದಿರಾನಗರ, ಟ್ಯಾನರಿ ರಸ್ತೆ, ಹೊರಮಾವು, ಅನ್ನಪೂರ್ಣೇಶ್ವರಿ ನಗರ ಮತ್ತಿತರ ಕಡೆ ಅಂಗಡಿಗಳನ್ನು ತೆರೆಯಲಾಗಿದೆ.
ಮಾಂಸದಂಗಡಿಗಳತ್ತ ಮುಖ ಮಾಡಿದ ಸಿಟಿಜನ ಹೊಸತೊಡಕಿನ ಹಿನ್ನೆಲೆಯಲ್ಲಿ ಇಂದು ಸಿಟಿಜನ ಬೆಳ್ಳಂಬೆಳಗ್ಗೆ ಮಾಂಸ ಖರೀದಿಗೆ ಮುಂದಾಗಿದ್ದಾರೆ. ಮೈಸೂರು ರಸ್ತೆಯ ಪಾಪಣ್ಣ ಮಟನ್ ಸ್ಟಾಲ್ನಲ್ಲಿ ಜನರ ದಂಡು ಕಂಡುಬಂದಿದ್ದು, ಮಾಂಸ ಖರೀದಿಗೆ ಕ್ಯೂ ನಿಂತಿದ್ದಾರೆ. ಇಂದು ಮಟನ್ ಒಂದು ಕೆಜಿಗೆ 800 ರೂ. ಇದ್ದು, ಹೊಸತೊಡಕು ಹಿನ್ನೆಲೆಯಲ್ಲಿ ಕೆಜಿಗೆ ಸುಮಾರು 20 ರೂ. ದರ ಏರಿಕೆಯಾಗಿದೆ.