ಗದಗ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳ 157 ನೇ ಜಯಂತ್ಯೋತ್ಸವವು ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ.
ಇದರ ಅಂಗವಾಗಿ ಮುಂಡರಗಿ ಪಟ್ಟಣದ ವಾರ್ಡುಗಳಲ್ಲಿ ಪ್ರತಿದಿನ ಬೆಳಿಗ್ಗೆ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಕುಮಾರೇಶ್ವರ ಜ್ಯೋತಿ ರಥಯಾತ್ರೆ ಒಳಗೊಂಡ ಮಠಾಧೀಶರ ಸದ್ಭಾವನಾ ಪಾದಯಾತ್ರೆ ಜಾತಿ, ಮತ, ಪಂಥಗಳನ್ನ ಮೀರಿ ನಡೆಯುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಕಡ್ಲಿಪೇಟೆ ಓಣಿಯ ಮುಸ್ಲಿಂ ಸಮಾಜದ ಮಕ್ಕಾ ಮಜೀದ್ ಕಮೀಟಿ ಸದಸ್ಯರು, ಕುಮಾರೇಶ್ವರ ಜ್ಯೋತಿಯಾತ್ರೆಯನ್ನ ಹಾಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರನ್ನ ಆತ್ಮೀಯವಾಗಿ ಸ್ವಾಗತಿಸಿಕೊಂಡರು. ಆ ಮೂಲಕ ಹಿಂದೂ ಮುಸ್ಲಿಂ ಒಂದೇ ಅನ್ನೋ ಭಾವೈಕ್ಯತೆಯ ಸಂದೇಶ ಸಾರುವದರೊಂದಿಗೆ, ಮಠಾಧೀಶರ ಸದ್ಭಾವನಾ ಪಾದಯಾತ್ರೆಗೆ
ಕಡ್ಲಿಪೇಟೆ ಓಣಿಯ ಮುಸ್ಲಿಂ ಸಮಾಜದ ಬಾಂಧವರು ಭಾವೈಕ್ಯತೆ ಮೆರಗನ್ನ ನೀಡಿದರು. ಈ ವೇಳೆ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಜಿ, ಲಿಂಗನಾಯಕನಹಳ್ಳಿ ಚೆನ್ನವೀರ ಸ್ವಾಮಿಜಿ, ಹಾವೇರಿಯ ಸದಾಶಿವ ಸ್ವಾಮಿಜಿ, ಮಣಕವಾಡದ ಸಿದ್ಧರಾಮ ಸ್ವಾಮಿಜಿ, ಬಸವನ ಬಾಗೇವಾಡಿ ಸ್ವಾಮಿಜಿ, ನರಗುಂದದ ಶಿವಕುಮಾರ ಸ್ವಾಮಿಜಿ ಸೇರಿದಂತೆ ಕುಮಾರೇಶ್ವರ ಜಯಂತ್ಯೋತ್ಸವ ಸಮಿತಿಯ ಸರ್ವ ಮಠಾಧೀಶರು ಪಾಲ್ಗೊಂಡಿದ್ದರು.